ADVERTISEMENT

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಬೆಲೆಏರಿಕೆ ಮುಕ್ತ ಭಾರತ’ ಆಂದೋಲನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 16:04 IST
Last Updated 31 ಮಾರ್ಚ್ 2022, 16:04 IST
ನವದೆಹಲಿಯ ವಿಜಯ್‌ ಚೌಕದಲ್ಲಿ ಗುರುವಾರ ಇಂಧನ ಬೆಲೆ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸಂಸದರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ನವದೆಹಲಿಯ ವಿಜಯ್‌ ಚೌಕದಲ್ಲಿ ಗುರುವಾರ ಇಂಧನ ಬೆಲೆ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸಂಸದರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಇಂಧನ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ನವದೆಹಲಿಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಬೆಲೆಏರಿಕೆ ಮುಕ್ತ ಭಾರತ’ (ಮೆಹಗಾಂಯಿ ಮುಕ್ತ್ ಭಾರತ್) ಆಂದೋಲನದ ಅಂಗವಾಗಿ ಪ್ರತಿಭಟನೆ ನಡೆಸಲಾಯಿತು.

ಇಂಧನ ಮತ್ತು ಎಲ್‌ಪಿಜಿ ಬೆಲೆ ಏರಿಕೆ ವಿರುದ್ಧ ಗುರುವಾರ ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಬೆಳಿಗ್ಗೆ ಸಂಸತ್ತಿನ ಬಳಿಯ ವಿಜಯ್ ಚೌಕದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ADVERTISEMENT

ಮಧ್ಯಾಹ್ನ 1.30ರ ವೇಳೆಗೆ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರು ಸಂಸತ್ತಿನ ಗೇಟಿನ ಬಳಿ ಬಂದು ಘೋಷಣೆಗಳನ್ನು ಕೂಗಿದರು. ತಕ್ಷಣವೇ ಅವರನ್ನು ಭದ್ರತಾ ಪಡೆಗಳು ಸುತ್ತುವರಿದವು. ಬಳಿಕ ದೆಹಲಿ ಪೊಲೀಸರು ಪ್ರತಿಭಟನನಿರತರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಕೆಲ ಸಮಯದವರೆಗೆ ಸಂಸತ್ತಿನ ದ್ವಾರಗಳನ್ನು ಮುಚ್ಚಲಾಯಿತು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಹಿಂದೆಂದಿಗಿಂತಲೂ ಅಡುಗೆ ಅನಿಲ ಮತ್ತು ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು.

‘ಸರ್ಕಾರವು ಬೆಲೆಏರಿಕೆ ನಿಯಂತ್ರಿಸಬೇಕು. ಪೆಟ್ರೋಲ್, ಡೀಸೆಲ್‌ನ ಬೆಲೆ ಹೆಚ್ಚಿಸುವುದನ್ನು ನಿಲ್ಲಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮವರ್ಗದ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ’ ಎಂದು ಅವರು ಹೇಳಿದರು.
ವಿವಿಧ ದೇಶಗಳ ಪೆಟ್ರೋಲ್ ದರವನ್ನು ರಾಹುಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಅಫ್ಗಾನಿಸ್ತಾನ– ₹ 66.99, ಪಾಕಿಸ್ತಾನ– ₹ 62.38, ಶ್ರೀಲಂಕಾ– ₹ 72.96, ಬಾಂಗ್ಲಾದೇಶ– ₹ 78.53, ಭೂತಾನ್– ₹ 86.28, ನೇಪಾಳ– ₹ 97.05 ಮತ್ತು ಭಾರತದಲ್ಲಿ ಪೆಟ್ರೋಲ್ ದರ ₹101.81 ಇದೆ.

ಲೋಕಸಭೆಯಲ್ಲಿ ಸಭಾತ್ಯಾಗ

ನವದೆಹಲಿ (ಪಿಟಿಐ): ಇಂಧನ ಬೆಲೆಯ ನಿರಂತರ ಏರಿಕೆಯನ್ನು ವಿರೋಧಿಸಿ ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ವಿವಿಧ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ, ಕಲಾಪ ಬಹಿಷ್ಕರಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ಇಂಧನ ಬೆಲೆ ಏರಿಕೆ ವಿರೋಧಿಸಿ ಧರಣಿ ಆರಂಭಿಸಿದ ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್ ಓಂ ಬಿರ್ಲಾ ಅವರು, ‘ಈ ವಿಷಯವನ್ನು ಪ್ರಸ್ತಾಪಿಸಲು ಈ ಅಧಿವೇಶನದಲ್ಲಿ ಈ ಹಿಂದೆ ನಾಲ್ಕು ಸಂದರ್ಭಗಳಲ್ಲಿ ಅವಕಾಶ ನೀಡಲಾಗಿದೆ. ಹಾಗಾಗಿ, ಸದಸ್ಯರು ತಮ್ಮ ಸ್ವಸ್ಥಾನಗಳಿಗೆ ತೆರಳಿ ಕಲಾಪದಲ್ಲಿ ಭಾಗವಹಿಸಬೇಕು’ ಎಂದರು. ಆದರೆ, ಸ್ಪೀಕರ್ ಅವರ ಮನವಿ ನಿರ್ಲಕ್ಷಿಸಿದ ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಸುಮಾರು 30 ನಿಮಿಷಗಳ ಧರಣಿಯ ಬಳಿಕ ಪ್ರತಿಭಟನನಿರತರು ಕಲಾಪ ಬಹಿಷ್ಕರಿಸಿ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.