ADVERTISEMENT

ಪೋಹಾ ತಿನ್ನುವವರನ್ನು ಬಾಂಗ್ಲಾದೇಶಿಯರೆಂದು ಗುರುತಿಸಬಹುದು: ಬಿಜೆಪಿ ನಾಯಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 7:13 IST
Last Updated 24 ಜನವರಿ 2020, 7:13 IST
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ   

ಇಂದೋರ್: ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಾಣ ಕಾರ್ಮಿಕರಲ್ಲಿ ಕೆಲವು ಬಾಂಗ್ಲಾದೇಶಿಯರು ಇದ್ದಾರೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಅವರು ಶಂಕಿಸಿದ್ದು, ಅವರ ವಿಚಿತ್ರ ಆಹಾರ ಪದ್ಧತಿಯು ಅವರ ರಾಷ್ಟ್ರೀಯತೆಯ ಬಗ್ಗೆ ಅನುಮಾನವನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬೆಂಬಲಿಸುವ ವಿಚಾರ ಸಂಕಿರಣದಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಇತ್ತೀಚೆಗೆ ನನ್ನ ಮನೆಗೆ ಹೊಸದಾಗಿ ಕೊಠಡಿಯೊಂದನ್ನು ನಿರ್ಮಿಸುವ ವೇಳೆ ಕೆಲವು ಕಾರ್ಮಿಕರ ಆಹಾರ ಪದ್ಧತಿಯು ನನಗೆ ವಿಚಿತ್ರವಾಗಿ ತೋರಿತು. ಅವರು ಕೇವಲ 'ಪೋಹಾ'ವನ್ನು (ಅವಲಕ್ಕಿ) ಮಾತ್ರ ತಿನ್ನುತ್ತಿದ್ದರು ಎಂದು ಹೇಳಿದರು.

ಅವರ ಮೇಲ್ವಿಚಾರಕ ಮತ್ತು ಕಟ್ಟಡ ಗುತ್ತಿಗೆದಾರರೊಂದಿಗೆ ಮಾತನಾಡಿದ ನಂತರ, ಕಾರ್ಮಿಕರು ಬಾಂಗ್ಲಾದೇಶದವರು ಎಂಬ ಶಂಕೆ ವ್ಯಕ್ತವಾಯಿತು. ಈ ಕಾರ್ಮಿಕರು ಬಾಂಗ್ಲಾದೇಶದ ನಿವಾಸಿಗಳೆಂದು ನನಗೆ ಅನುಮಾನವಿದೆ. ನಾನು ಅನುಮಾನಾಗೊಂಡ ಎರಡು ದಿನಗಳ ನಂತರ, ಅವರು ನನ್ನ ಮನೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ. ಜನರಿಗೆ ಎಚ್ಚರಿಕೆ ನೀಡಲು ಮಾತ್ರ ನಾನು ಈ ಘಟನೆಯನ್ನು ಹೇಳಿದ್ದೇನೆ ಎಂದು ಅವರು ಹೇಳಿದರು.

ಕಳೆದ ಒಂದೂವರೆ ವರ್ಷದಿಂದಲೂ ಬಾಂಗ್ಲಾದೇಶದ ಉಗ್ರನೊಬ್ಬ ನನ್ನ ಮೇಲೆ ನಿಗಾ ಇಟ್ಟಿದ್ದಾನೆ. ನಾನು ಯಾವಾಗ ಹೊರಗೆ ಹೋದರೂ ಕೂಡ ಶಸ್ತ್ರ ಸಜ್ಜಿತ ಆರು ಜನ ಭದ್ರತಾ ಪಡೆ ಸಿಬ್ಬಂದಿ ನನ್ನನ್ನು ಹಿಂಬಾಲಿಸುತ್ತಾರೆ. ಈ ದೇಶದಲ್ಲಿ ಏನು ನಡೆಯುತ್ತಿದೆ? ಹೊರಗಿನ ಜನರು ದೇಶಕ್ಕೆ ನುಗ್ಗಿ ಭಯೋತ್ಪಾದನೆಯನ್ನು ಎಲ್ಲೆಡೆ ಹರಡುತ್ತಿದ್ದಾರೆಯೇ? ಎಂದು ಆತಂಕ ವ್ಯಕ್ತಪಡಿಸಿದರು.

ವದಂತಿಗಳಿಂದಾಗಿ ಗೊಂದಲಕ್ಕೀಡಾಗಬೇಡಿ. ಪೌರತ್ವ ತಿದ್ದುಪಡಿ ಕಾನೂನು ದೇಶದ ಹಿತಾಸಕ್ತಿಗಿದೆ. ಈ ಕಾನೂನು ನಿಜವಾದ ವಲಸಿಗರಿಗೆ ಆಶ್ರಯ ಒದಗಿಸುತ್ತದೆ ಮತ್ತು ದೇಶದ ಆಂತರಿಕ ಭದ್ರತೆಗೆ ತೊಡಕಾಗಿರುವ ನುಸುಳುಕೋರರನ್ನು ಗುರುತಿಸುತ್ತದೆ ಎಂದು ಹೇಳಿದರು.

ಬಿಜೆಪಿ ನಾಯಕನ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದು, ಹಾಗಾದರೆ ಪಿಜ್ಜಾ ತಿನ್ನುವವರು ಅಮೆರಿಕನ್ನರೇ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಪೋಹಾ ತಿನ್ನುವವರೆಲ್ಲ ಹಾಗಾದರೆ ಬಾಂಗ್ಲಾದೇಶಿಯರೇ ಎಂದು ವಿಜಯ್ ವರ್ಗಿಯಾ ಅವರನ್ನು ಟೀಕಿಸಿದ್ದಾರೆ.

ಈ ಕುರಿತಾದ ಕೆಲವು ಟ್ವೀಟ್‌ಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.