ADVERTISEMENT

ಖುದ್ದು ಹಾಜರಿಯಿಂದ ವಿನಾಯಿತಿ: ಬಿಹಾರ ಮುಖ್ಯ ಕಾರ್ಯದರ್ಶಿ ಅರ್ಜಿ ತಿರಸ್ಕರಿಸಿದ SC

ಬೀದಿ ನಾಯಿಗಳ ಪ್ರಕರಣ: ಬಿಹಾರ ಮುಖ್ಯ ಕಾರ್ಯದರ್ಶಿ ಮೇಲ್ಮನವಿ ವಿಚಾರಣೆ

ಪಿಟಿಐ
Published 30 ಅಕ್ಟೋಬರ್ 2025, 13:16 IST
Last Updated 30 ಅಕ್ಟೋಬರ್ 2025, 13:16 IST
–
   

ನವದೆಹಲಿ: ವಿಧಾನಸಭೆ ಚುನಾವಣೆ ಕಾರಣದಿಂದಾಗಿ, ಬೀದಿ ನಾಯಿಗಳ ಹಾವಳಿ ಕುರಿತ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ತಮಗೆ ವಿನಾಯಿತಿ ನೀಡುವಂತೆ ಕೋರಿ ಬಿಹಾರ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತಿರಸ್ಕರಿಸಿದೆ.

‘ಬಿಹಾರ ವಿಧಾನಸಭೆ ಚುನಾವಣೆ ಕುರಿತಂತೆ ಚುನಾವಣಾ ಆಯೋಗ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಹೀಗಾಗಿ ಚಿಂತಿಸುವ ಅಗತ್ಯ ಇಲ್ಲ. ಮುಖ್ಯ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಲಿ’ ಎಂದು ಬಿಹಾರ ಸರ್ಕಾರ ಪರ ಹಾಜರಿದ್ದ ವಕೀಲರನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್‌ ಮೆಹ್ತಾ ಅವರು ಇದ್ದ ನ್ಯಾಯಪೀಠ ಮೇಲ್ಮನವಿ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆ ನವೆಂಬರ್‌ 3ರಂದು ನಡೆಯಲಿದೆ.

ADVERTISEMENT

ಬಿಹಾರ ವಿಧಾನಸಭೆ ಚುನಾವಣೆಯ ಮತದಾನವು ನವೆಂಬರ್‌ 6 ಹಾಗೂ 11ರಂದು ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ.

ವಿಚಾರಣೆ ವೇಳೆ, ‘ನ್ಯಾಯಾಲಯದ ಆದೇಶ ಪಾಲನೆ ಮಾಡದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನವೆಂಬರ್‌ 3ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ. ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ, ಬೇರೆ ಕಾರ್ಯದರ್ಶಿ ಹಾಜರಾಗುವಂತೆ ನಿರ್ದೇಶನ ನೀಡಬೇಕು’ ಎಂದು ಬಿಹಾರ ಸರ್ಕಾರ ಪರ ವಕೀಲರು ನ್ಯಾಯಪೀಠಕ್ಕೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇತರ ಕಾರ್ಯದರ್ಶಿಗಳು ಅವರ ಕೆಲಸವನ್ನು ಮಾಡಲಿ. ಮುಖ್ಯಕಾರ್ಯದರ್ಶಿಯೇ ಅಂದು ವಿಚಾರಣೆಗೆ ಖುದ್ದು ಹಾಜರಾಗಲಿ’ ಎಂದು ಹೇಳಿತು.

ಬೀದಿನಾಯಿಗಳ ಕುರಿತ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 27ರಂದು ನಡೆಸಿದ್ದ ನ್ಯಾಯಪೀಠ, ನವೆಂಬರ್ 3ರಂದು ನಡೆಯುವ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಹೊರತುಪಡಿಸಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿತ್ತು.

ಅಲ್ಲದೆ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ಕುರಿತು ವಿವರಣೆವುಳ್ಳ ಪ್ರಮಾಣಪತ್ರವನ್ನು ಸಹ ಅಂದು ಸಲ್ಲಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.