ADVERTISEMENT

ವಿಷಕಾರಿ ಚುಚ್ಚುಮದ್ದು ನೀಡಿ ಶ್ವಾನಗಳ ಹತ್ಯೆ: ಸಾವಿನ ಸಂಖ್ಯೆ 900ಕ್ಕೆ ಏರಿಕೆ

ತೆಲಂಗಾಣದಲ್ಲಿ ಬೀದಿ ನಾಯಿಗಳ ಹತ್ಯೆ ಪ್ರಕರಣ ಹೆಚ್ಚಳ

ಪಿಟಿಐ
Published 24 ಜನವರಿ 2026, 16:06 IST
Last Updated 24 ಜನವರಿ 2026, 16:06 IST
...
...   

ಹೈದರಾಬಾದ್‌: ತೆಲಂಗಾಣದಲ್ಲಿ ಮತ್ತೆ 300 ಶ್ವಾನಗಳನ್ನು ಹತ್ಯೆ ಮಾಡಲಾಗಿದೆ.  ಜಗಿತ್ಯಾಲ ಜಿಲ್ಲೆಯ ಪೆಗದಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇದರೊಂದಿಗೆ ರಾಜ್ಯದಲ್ಲಿ ಹತ್ಯೆಗೀಡಾದ ಶ್ವಾನಗಳ ಸಂಖ್ಯೆ 900ಕ್ಕೆ ಏರಿಕೆಯಾಗಿದೆ ಎಂದು ಪ್ರಾಣಿಗಳ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ. 

‘ಪೆಗದಪಲ್ಲಿಯಲ್ಲಿ ಜನವರಿ 22ರಂದು ವಿಷಕಾರಿ ಚುಚ್ಚುಮದ್ದು ನೀಡಿ 300 ಬೀದಿ ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ. ಗ್ರಾಮದ ಸರಪಂಚ್‌ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸೇರಿ ಈ ಕೃತ್ಯ ಎಸಗಿದ್ದಾರೆ. ಶ್ವಾನಗಳನ್ನು ಕೊಲ್ಲುವುದಕ್ಕಾಗಿಯೇ ಅವರು ಕೆಲವರನ್ನು ನೇಮಿಸಿಕೊಂಡಿದ್ದಾರೆ’ ಎಂದೂ ಪೊಲೀಸರಿಗೆ ಹೋರಾಟಗಾರರು ದೂರು ನೀಡಿದ್ದಾರೆ. 

ADVERTISEMENT

ದೂರನ್ನು ಆಧರಿಸಿ ಸರಪಂಚ್‌ ಹಾಗೂ ‍‍ಪಂಚಾಯಿತಿ ಕಾರ್ಯದರ್ಶಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಜತೆಗೆ ತನಿಖೆ ವೇಳೆ 70 ರಿಂದ 80 ಶ್ವಾನಗಳ ಕಳೆಬರಹ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

3–4 ದಿನಗಳ ಹಿಂದೆಯೇ ಈ ಕೃತ್ಯ ನಡೆದಿರುವಂತಿದೆ. ಕೃತ್ಯದಲ್ಲಿ ಆರೋಪಿಗಳ ಕೈವಾಡ ಇದೆಯೇ ಎಂಬುದನ್ನು ಈ ಹಂತದಲ್ಲಿ ದೃಢಪಡಿಸಲಾಗದು. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದ್ದು, ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಜನವರಿ 19ರಂದು ಯಾಚಾರಮ್‌ ಗ್ರಾಮದಲ್ಲಿ 100 ಶ್ವಾನಗಳನ್ನು, ಹನುಮಕೊಂಡ ಜಿಲ್ಲೆಯಲ್ಲಿ 300, ಕಾಮರೆಡ್ಡಿ ಜಿಲ್ಲೆಯಲ್ಲಿ 200 ಶ್ವಾನಗಳನ್ನು ಹತ್ಯೆಗೈಯ್ಯಲಾಗಿದೆ ಎಂದೂ ಪ್ರಾಣಿಗಳ ಹಕ್ಕುಗಳ ಸಂಘಟನೆಗಳು ಆರೋಪಿಸಿ, ದೂರು ದಾಖಲಿಸಿದ್ದವು.

ಬೀದಿ ನಾಯಿಗಳ ಹತ್ಯೆ ಪ್ರಕರಣದಲ್ಲಿ ಸರಪಂಚ್‌ ಸೇರಿದಂತೆ ಕೆಲವು ಚುನಾಯಿತ ಪ್ರತಿನಿಧಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಬೀದಿ ನಾಯಿಗಳ ಹಾವಳಿ ತಪ್ಪಿಸುವುದಾಗಿ ಜನರಿಗೆ ನೀಡಿರುವ ಭರವಸೆ ಈಡೇರಿಸಲು ಅವರು ಈ ಕೃತ್ಯಗಳನ್ನು ಎಸಗುತ್ತಿರಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.