ADVERTISEMENT

ಮಾಂಸಾಹಾರ ನಿಷೇಧ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಬಂಧನ: ಆರೋಪ

ಪಿಟಿಐ
Published 20 ಜನವರಿ 2023, 14:15 IST
Last Updated 20 ಜನವರಿ 2023, 14:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್‌ ಕಾಲೇಜಿನ ಕ್ಯಾಂಟೀನ್‌ ಮತ್ತು ಹಾಸ್ಟೆಲ್‌ನಲ್ಲಿ ಮಾಂಸಾಹಾರ ನಿಷೇಧ ಆದೇಶದ ವಿರುದ್ಧ ಕಾಲೇಜಿನ ಹೊರಗೆ ಪ್ರತಿಭಟಿಸುತ್ತಿದ್ದ 40 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿದ್ಯಾರ್ಥಿ ಸಂಘಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಮಾಂಸಾಹಾರವನ್ನು ಕೈಬಿಟ್ಟ ನಿರ್ಧಾರದ ವಿರುದ್ಧ ಕಾಲೇಜಿನ ಹಾಸ್ಟೆಲ್‌ ಎದುರು ಪ್ರತಿಭಟಿಸಲು ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾದ (ಎಸ್‌ಎಫ್‌ಐ) ಹಂಸರಾಜ್‌ ಕಾಲೇಜು ಘಟಕ ಬುಧವಾರ ಕರೆ ನೀಡಿತ್ತು.

‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದಾಗ್ಯೂ ಆಡಳಿತ ಮಂಡಳಿಯು ಕಾಲೇಜು ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ’ ಎಂದು ಎಸ್‌ಎಫ್‌ಐ ಕಾರ್ಯಕರ್ತೆ ಸಮಾ ತಿಳಿಸಿದರು.

ADVERTISEMENT

‘ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಸೂಚಿಸಲಾಗಿತ್ತು. ಆದಾಗ್ಯೂ 30ರಿಂದ 35 ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. 14ರಿಂದ 15 ವಿದ್ಯಾರ್ಥಿಗಳನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು’ ಎಂದು ಉಪ ಪೊಲೀಸ್‌ ಆಯುಕ್ತ (ಉತ್ತರ) ಸಾಗರ್‌ ಸಿಂಗ್‌ ಕಲ್‌ಸೀ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಲೇಜು ಪ್ರಾಂಶುಪಾಲ ರಾಮ ಶರ್ಮಾ ಅವರು, ‘ಮಾಂಸಾಹಾರ ನಿಷೇಧ ಆದೇಶವನ್ನು ಹಿಂಪಡೆಯುವುದಿಲ್ಲ. ಇದು ಆರ್ಯ ಸಮಾಜದ ಕಾಲೇಜು. ಕಾಲೇಜಿನಲ್ಲಿರುವ ಶೇ 90ರಷ್ಟು ವಿದ್ಯಾರ್ಥಿಗಳು ಸಸ್ಯಾಹಾರಿಗಳು. ಅವರೂ ಈ ಹಿಂದೆ ಮಾಂಸಾಹಾರ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.