ADVERTISEMENT

ಸುಖ್ಬೀರ್ ಬಾದಲ್ ವಾಹನದ ಮೇಲೆ ದಾಳಿ: ಶಿರೋಮಣಿ ದಳ ಆರೋಪ

ಪಿಟಿಐ
Published 2 ಫೆಬ್ರುವರಿ 2021, 12:09 IST
Last Updated 2 ಫೆಬ್ರುವರಿ 2021, 12:09 IST
ಜಲಾಲಾಬಾದ್‌ನಲ್ಲಿ ಮಂಗಳವಾರ ತಹ್‌ಸಿಲ್ ಕಚೇರಿ ಬಳಿ ತಮ್ಮ ಮೇಲೆ ನಡೆದ ದಾಳಿಯ ಘಟನೆ ಖಂಡಿಸಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಪಕ್ಷದ ಬೆಂಬಲಿಗರೊಂದಿಗೆ ಧರಣಿ ನಡೆಸಿದರು (ಪಿಟಿಐ ಚಿತ್ರ)
ಜಲಾಲಾಬಾದ್‌ನಲ್ಲಿ ಮಂಗಳವಾರ ತಹ್‌ಸಿಲ್ ಕಚೇರಿ ಬಳಿ ತಮ್ಮ ಮೇಲೆ ನಡೆದ ದಾಳಿಯ ಘಟನೆ ಖಂಡಿಸಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಪಕ್ಷದ ಬೆಂಬಲಿಗರೊಂದಿಗೆ ಧರಣಿ ನಡೆಸಿದರು (ಪಿಟಿಐ ಚಿತ್ರ)   

ಚಂಡೀಗಡ: ಪಂಜಾಬ್‌ನ ಜಲಾಲ್‌ಬಾದ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಿರೋಮಣಿ ಅಕಾಲಿದಳದ ಕಾರ್ಯಕರ್ತರ ಮೇಲೆ ದಾಳಿ ನಡೆಸಿದಾಗ ಪಕ್ಷದ ಮುಖ್ಯಸ್ ಸುಖ್ಬೀರ್ ಸಿಂಗ್ ಬಾದಲ್‌ ಅವರ ವಾಹನದ ಮೇಲೂ ಕಲ್ಲು ತೂರಿದ್ದಾರೆ ಎಂದು ಶಿರೋಮಣಿ ಅಕಾಲಿದಳ ಆರೋಪಿಸಿದೆ.

ಬಾದಲ್‌ ಅವರ ಮಾಧ್ಯಮ ಸಲಹೆಗಾರ ಜಂಗ್ವೀರ್ ಸಿಂಗ್, ‘ಆಡಳಿತ ಪಕ್ಷದ ಶಾಸಕ ರಮಿಂದರ್‌ ಸಿಂಗ್‌ ಅವ್ಲಾ ಅವರ ಪುತ್ರನ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕಾಂಗ್ರೆಸ್‌ ಗೂಂಡಾಗಳು ಶಿರೋಮಣಿ ಅಕಾಲಿ ದಳದ ಅಧ್ಯಕ್ಷರ ವಾಹನದ ಮೇಲೆ ಕಲ್ಲು ತೂರಿ, ಗುಂಡು ಹಾರಿಸಿದ್ದರಿಂದ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ’ ಎಂದು ಅವರು ದೂರಿದ್ದಾರೆ.

ADVERTISEMENT

ಜಲಾಲ್‌ಬಾದ್‌ನ ತೆಹ್‌ಸಿಲ್‌ ಸಂಕೀರ್ಣದಲ್ಲಿ ನಡೆದ ಈ ಘಟನೆಯಲ್ಲಿ ನಾಲ್ವರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಆದರೆ, ಬಾದಲ್‌ ಸುರಕ್ಷಿತವಾಗಿದ್ದಾರೆ.

‘ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಈ ಘಟನೆ ನಡೆದಾಗ ಪೊಲೀಸರು ಕೂಡ ಮೂಖಪ್ರೇಕ್ಷಕರಾಗಿದ್ದರು’ ಎಂದು ಶಿರೋಮಣಿ ಅಕಾಲಿದಳದ ನಾಯಕರಾದ ಪರಂಬನ್ಸ್ ಸಿಂಗ್ ರೊಮಾನಾ ಆರೋಪ ಮಾಡಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಜತೆಗೆ ಬಾದಲ್‌ ಹೋಗಿದ್ದಾಗ ಈ ಘಟನೆ ನಡೆದಿದೆ.ಫೆ.14 ರಂದು ಪಂಜಾಬ್‌ನ 8 ಮಹಾನಗರ ಪಾಲಿಕೆಗಳು ಮತ್ತು 109 ಪುರಸಭೆಗಳು ಹಾಗೂ ನಗರ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.