ADVERTISEMENT

ರಾಹುಲ್ ಭೇಟಿಯಾದ ಸಿಧು: ‘ಪತ್ರ’ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:09 IST
Last Updated 10 ಜೂನ್ 2019, 19:09 IST
ನವಜೋತ್‌ ಸಿಂಗ್‌ ಸಿಧು
ನವಜೋತ್‌ ಸಿಂಗ್‌ ಸಿಧು   

ನವದೆಹಲಿ:ಪಂಜಾಬ್‌ನ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಜೊತೆಗೆ ಮುನಿಸಿಕೊಂಡಿರುವ ಸಚಿವ, ಕಾಂಗ್ರೆಸ್‌ ಮುಖಂಡ ನವಜ್ಯೋತ್‌ ಸಿಂಗ್‌ ಸಿಧು ಸೋಮವಾರ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿಯಾಗಿ ‘ಪತ್ರ’ ನೀಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್‌ ಖಜಾಂಚಿ ಅಹ್ಮದ್ ಪಟೇಲ್ ಅವರನ್ನೂ ಸಿಧು ಭೇಟಿಯಾಗಿದ್ದರು. ಆದರೆ, ಸಿಧು ಅವರು ನೀಡಿದ ಪತ್ರದಲ್ಲಿ ಏನಿದೆ ಎಂಬುದು ಇನ್ನು ಬಹಿರಂಗವಾಗಿಲ್ಲ.

‘ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ‘ಪತ್ರ’ ನೀಡಿದ್ದೇನೆ. ಪರಿಸ್ಥಿತಿ ವಿವರಿಸಿದ್ದೇನೆ’ ಎಂದು ಸಿಧು ಪ್ರತಿಕ್ರಿಯಿಸಿದರು. ರಾಜಕೀಯ ಮಹತ್ವಾಕಾಂಕ್ಷೆಯ ಅವರು ಈಚಿನ ದಿನಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಜೊತೆಗೆ ಭಿನ್ನಮತ ಹೊಂದಿದ್ದಾರೆ.

ADVERTISEMENT

‘ಭಟಿಂಡಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ಕಡಿಮೆ ಅಂತರದಲ್ಲಿ ಸೋಲಲು ಸಿಧು ಹೊಣೆ’ ಎಂದುಮುಖ್ಯಮಂತ್ರಿ ಈಚೆಗೆಆರೋಪಿಸಿದ್ದರು. ಭಿನ್ನಮತದ ಹಿನ್ನೆಲೆಯಲ್ಲಿ ಸಿಧು ಈಚೆಗೆ ಸಂಪುಟ ಸಭೆಗೂ ಗೈರುಹಾಜರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಅವರ ಖಾತೆ ಬದಲಾಗಿತ್ತು.

ವಯನಾಡ್ ಪ್ರವಾಸದಲ್ಲಿದ್ದ ಕಾಂಗ್ರೆಸ್‌ ಅಧ್ಯಕ್ಷರ ಭೇಟಿಗಾಗಿ ಸಿಧು ನಾಲ್ಕು ದಿನಗಳಿಂದ ರಾಜಧಾನಿಯಲ್ಲಿ ನೆಲೆಸಿದ್ದರು. ರಾಹುಲ್‌ ಮತ್ತು ಪ್ರಿಯಾಂಕಾ ಅವರೊಂದಿಗೆ ಸಿಧು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಚಂಡಿಗಡ ಕ್ಷೇತ್ರದಲ್ಲಿ ಪತ್ನಿ ನವಜ್ಯೋತ್‌ ಕೌರ್ ಸಿಧುಗೆ ಟಿಕೆಟ್‌ ನಿರಾಕರಣೆ ಬಳಿಕ ಸಿ.ಎಂ ಜೊತೆಗೆ ಭಿನ್ನಮತ ಶುರುವಾಗಿದೆ. ಸಿಧು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರಿದ್ದರು.

ಚುನಾವಣೆಯಲ್ಲಿ ಪಕ್ಷದ ಸೋಲು ಉಲ್ಲೇಖಿಸಿದ್ದ ಮುಖ್ಯಮಂತ್ರಿ, ‘ಪಂಜಾಬ್‌ನಲ್ಲಿ ನಗರ ಪ್ರದೇಶದ ವೋಟ್‌ಬ್ಯಾಂಕ್ ಕಾಂಗ್ರೆಸ್‌ನ ಬೆನ್ನೆಲುಬು. ಆದರೆ, ಅಭಿವೃದ್ಧಿ ಕಾರ್ಯ ಜಾರಿಗೊಳಿಸುವಲ್ಲಿ ಸಿಧು ವೈಫಲ್ಯ ಪಕ್ಷದ ಮೇಲೆ ಪರಿಣಾಮ ಬೀರಿತು’ ಎಂದಿದ್ದರು.

ಸಿಧು ಖಾತೆಯನ್ನು ಬದಲಿಸಿದ್ದ ಮುಖ್ಯಮಂತ್ರಿ ಅವರು ಈಚೆಗೆ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರಚಿಸಿದ್ದ ಎಂಟು ಸಮಿತಿಗಳಿಂದ ಸಿಧು ಅವರನ್ನು ಕೈಬಿಟ್ಟಿದ್ದರು.

ಇನ್ನೊಂದೆಡೆ ಸಿಧು, ‘ನನ್ನ ಖಾತೆ ನಿರ್ಲಕ್ಷ್ಯಿಸಲಾಗಿದೆ. ಸಾಧನೆ ಮಾಡುತ್ತಲೇ ಇದ್ದೇನೆ. ನನ್ನನ್ನು ಕಡೆಗಣಿಸಲಾಗದು’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.