
ಸನ್ನಿ ಲಿಯೋನ್
ಮಥುರಾ: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
‘ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ‘ಶ್ರೀಕೃಷ್ಣ ಲೀಲೆ’ ಪ್ರದರ್ಶನ ನಡೆಯುತ್ತದೆ. ಜತೆಗೆ, ಪ್ರಾರ್ಥನೆ ಸಲ್ಲಿಸಲು ಧರ್ಮಗುರುಗಳು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಅವರನ್ನು ಕರೆಸಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸನ್ನಿ ಅವರನ್ನು ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಬ್ರಿಜ್ ಭೂಮಿ ಮತ್ತು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ’ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಅವರು ಅಶ್ಲೀಲತೆಯನ್ನು ಪ್ರಚಾರ ಮಾಡುತ್ತಾರೆ. ಅಂತವರನ್ನು ಬ್ರಿಜ್ ಭೂಮಿಯಿಂದ ದೂರವಿಡಬೇಕು ಎಂದೂ ದಿನೇಶ್ ಹೇಳಿದ್ದಾರೆ.
‘ಜನವರಿ 1ರಂದು ನಡೆಯಲಿದ್ದ ಲೈವ್ ಡಿಜೆ ಪ್ರದರ್ಶನದಲ್ಲಿ ಸನ್ನಿ ಲಿಯೋನ್ ಭಾಗವಹಿಸಬೇಕಿತ್ತು. ಆದರೆ, ಮಠಾಧೀಶರು ಮತ್ತು ಭಕ್ತಾದಿಗಳ ಭಾವನೆಗಳನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದು, ಟಿಕೆಟ್ ದರ ಮರುಪಾವತಿ ಮಾಡುತ್ತಿದ್ದೇವೆ’ ಎಂದು ಆಯೋಜಕರಲ್ಲಿ ಒಬ್ಬರಾದ ಮಿಥುಲ್ ಪಾಠಕ್ ಹೇಳಿದ್ದಾರೆ.
ಸನ್ನಿ ಲಿಯೋನ್ ಅವರು ಡಿಜೆ ಆಗಿ ಪ್ರದರ್ಶನ ನೀಡಲು ಬರುತ್ತಿದ್ದರು. ಆದರೆ, ತಪ್ಪು ಮಾಹಿತಿ ಹರಡಿದ್ದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದೂ ಪಾಠಕ್ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಅವರು ದೇಶದ ಎಲ್ಲೆಡೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಎಲ್ಲಾದರೂ ಅವರು ವಿರೋಧಿಸಲ್ಪಟ್ಟಿದ್ದಾರೆಯೇ ಎಂದು ಪಾಠಕ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.