ADVERTISEMENT

ಗರ್ಭಿಣಿ ಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಲಾಗದು: ಸುಪ್ರೀಂ ಕೋರ್ಟ್‌

17 ವರ್ಷದ ಬಾಲಕಿಯ ಗರ್ಭಪಾತಕ್ಕೆ ‘ಸುಪ್ರೀಂ’ ಒಪ್ಪಿಗೆ

ಪಿಟಿಐ
Published 6 ಫೆಬ್ರುವರಿ 2026, 15:46 IST
Last Updated 6 ಫೆಬ್ರುವರಿ 2026, 15:46 IST
   

ನವದೆಹಲಿ: ‘ಯಾವುದೇ ಮಹಿಳೆ, ಅದರಲ್ಲೂ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಲ್ಲಿ, ಗರ್ಭ ಧರಿಸಿರುವ ಸ್ಥಿತಿಯನ್ನು ಮುಂದುವರಿಸುವಂತೆ ನ್ಯಾಯಾಲಯ ಆಕೆಗೆ ಬಲವಂತ ಮಾಡಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

30 ವಾರಗಳ ಗರ್ಭಿಣಿಯಾಗಿರುವ 17 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸುವಂತೆ ಮುಂಬೈನ ಜೆ.ಜೆ.ಆಸ್ಪತ್ರೆಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನೆರೆಮನೆ ಬಾಲಕನೊಂದಿಗೆ ಸಂಬಂಧ ಹೊಂದಿದ್ದ ಬಾಲಕಿಯು ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ಜಲ್‌ ಭುಯಾನ್ ಅವರು ಇದ್ದ ನ್ಯಾಯಪೀಠ ನಡೆಸಿತು.

ADVERTISEMENT

‘ಬಾಲಕಿಯು ಗರ್ಭ ಧರಿಸಿರುವುದಕ್ಕೆ ಒಪ್ಪಿತ ಸಂಬಂಧ ಅಥವಾ ಲೈಂಗಿಕ ದೌರ್ಜನ್ಯ ಕಾರಣವೇ ಎಂಬುದು ಈಗ ನಮ್ಮ ಮುಂದಿರುವ ವಿಚಾರವಲ್ಲ. ಗರ್ಭಿಣಿ ಸ್ಥಿತಿಯನ್ನು ಮುಂದುವರಿಸುವ ಕುರಿತು ಅಪ್ರಾಪ್ತ ವಯಸ್ಕಳು ಹೊಂದಿರುವ ಹಕ್ಕನ್ನು ನ್ಯಾಯಾಲಯ ಪರಿಗಣಿಸಿದೆ’ ಎಂದು ಪೀಠ ಹೇಳಿದೆ.

‘ಸ್ವತಃ ಈಕೆ ಅಪ್ರಾಪ್ತ ವಯಸ್ಕಳು. ದುರದೃಷ್ಟವಶಾತ್‌, ತಾನು ಹೊಂದಿದ ಸಂಬಂಧದಿಂದಾಗಿ ಈ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ಗರ್ಭ ಧರಿಸಿರುವ ಸ್ಥಿತಿಯನ್ನು ಆಕೆ ಮುಂದುವರಿಸುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಎನಿಸುತ್ತದೆ. ಆಕೆಗೆ ಜನಿಸುವ ಮಗು ಕೂಡ ಅಕ್ರಮ ಸಂತಾನ ಎನಿಸುತ್ತದೆ. ಜೊತೆಗೆ, ಬಾಲಕಿಯು ಮಗುವಿಗೆ ಜನ್ಮ ನೀಡುವುದಕ್ಕೆ ಒಪ್ಪುತ್ತಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕಿದೆ’ ಎಂದೂ ಪೀಠ ಹೇಳಿದೆ.

‘ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ನೈತಿಕತೆ ಮತ್ತು ಕಾನೂನಿಗೆ ಸಂಬಂಧಿಸಿ ಕಠಿಣವಾದ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ತಜ್ಞವೈದ್ಯರಿಂದ ಗರ್ಭಪಾತಕ್ಕೆ ಅವಕಾಶ ಕೊಡದಿದ್ದಲ್ಲಿ, ಜನರು ನಕಲಿ ವೈದ್ಯರು ಮತ್ತು ಕಾನೂನುಬಾಹಿರವಾಗಿ ಗರ್ಭಪಾತ ಮಾಡುವ ಆಸ್ಪತ್ರೆಗಳ ಕದತಟ್ಟುತ್ತಾರೆ. ಇದು ಸುರಕ್ಷಿತ ಆಯ್ಕೆಯಾಗದು’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. 

‘ಒಂದು ವೇಳೆ ಬಾಲಕಿಗೆ ಹೆರಿಗೆಯಾದಲ್ಲಿ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ವೈದ್ಯಕೀಯ ವರದಿಗಳು ಹೇಳುತ್ತವೆ. ಅಲ್ಲದೇ, ತಾಯಿ ಆ ಮಗುವಿನ ಪಾಲನೆ–ಪೋಷಣೆಗೆ ಒಪ್ಪದಿದ್ದಲ್ಲಿ ಅದನ್ನು ಅನಾಥಾಶ್ರಮಕ್ಕೆ ಒಪ್ಪಿಸಬಹುದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ’ ಎಂದು ಮಹಾರಾಷ್ಟ್ರ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಈ ವಿಚಾರವಾಗಿ ವಿಸ್ತೃತ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿದ ನ್ಯಾಯಪೀಠ, ಅರ್ಜಿ ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.