ADVERTISEMENT

ಮೌಖಿಕ ನಿರ್ದೇಶನವಲ್ಲ; ತೀರ್ಪಿನ ಮೂಲಕ ಮಾತಾಡಿ -ಸುಪ್ರೀಂ ಕೋರ್ಟ್‌

ಪಿಟಿಐ
Published 31 ಆಗಸ್ಟ್ 2021, 19:45 IST
Last Updated 31 ಆಗಸ್ಟ್ 2021, 19:45 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನ್ಯಾಯಮೂರ್ತಿಗಳು ಮೌಖಿಕ ನಿರ್ದೇಶನಗಳ ಬದಲಾಗಿ, ತಮ್ಮ ತೀರ್ಪು ಮತ್ತು ಆದೇಶದ ಮುಖಾಂತರವೇ ಮಾತನಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ನ್ಯಾಯಾಲಯವು ಹೊರಡಿಸುವ ಮೌಖಿಕ ನಿರ್ದೇಶನಗಳು ನ್ಯಾಯಾಂಗದ ದಾಖಲೆಗಳನ್ನು ರೂಪಿಸುವಂಥವುಗಳಲ್ಲ. ಹೀಗಾಗಿ ಅವುಗಳನ್ನು ತಪ್ಪಿಸಬೇಕು ಎಂದುನ್ಯಾಯಮೂರ್ತಿಗಳಾದಡಿ.ವೈ ಚಂದ್ರಚೂಡ ಹಾಗೂ ಎಂ.ಆರ್‌. ಶಾ ಅವರನ್ನು ಒಳಗೊಂಡ ಪೀಠ ತಿಳಿಸಿದೆ.

ವಂಚನೆ ಮತ್ತು ವಿಶ್ವಾಸದ್ರೋಹದ ಪ್ರಕರಣವೊಂದರಲ್ಲಿ, ಆರೋಪಿಯನ್ನು ಬಂಧಿಸದಂತೆ ಗುಜರಾತ್‌ ಹೈಕೋರ್ಟ್‌ಆದೇಶ ನೀಡಿತ್ತು. ಇದು ಮೌಖಿಕ ನಿರ್ದೇಶನ ರೂಪದಲ್ಲಿತ್ತು. ಅದರ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರಟ್‌ ಹೀಗೆ ಹೇಳಿದೆ.

ADVERTISEMENT

‘ಲಿಖಿತ ಆದೇಶವು ಕಡ್ಡಾಯ. ಬಂಧಿಸದಂತೆ ತಡೆಯುವ ಬಗ್ಗೆ ಮೌಖಿಕವಾಗಿ (ಬಹುಶಃ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗೆ) ನಿರ್ದೇಶನ ನೀಡುವುದು ಅಧಿಕೃತವಾಗಿ ದಾಖಲಾಗುವುದಿಲ್ಲ. ಅಂಥ ಪದ್ಧತಿಯನ್ನು ಕೈಬಿಡಬೇಕು’ ಎಂದು ನ್ಯಾಯಪೀಠ ತಿಳಿಸಿದೆ.

ಆರೋಪಿಯನ್ನು ಬಂಧಿಸುವುದಕ್ಕೆ ತಡೆಕೊಟ್ಟು ನಿರ್ದೇಶನ ನೀಡುವಾಗ ಹೈಕೋರ್ಟ್‌ ಅನುಸರಿಸಿದ ವಿಧಾನವೇ ಕ್ರಮಬದ್ಧವಾಗಿಲ್ಲ. ಒಂದು ವೇಳೆ, ನ್ಯಾಯಾಲಯಕ್ಕೆ ವಾದಿ–ಪ್ರತಿವಾದಿಗಳ ನಡುವೆ ರಾಜಿ ಸಾಧ್ಯತೆಯ ಅವಕಾಶವಿದೆ ಎನ್ನಿಸಿ ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದ್ದರೆ, ಆ ಬಗ್ಗೆ ನ್ಯಾಯಾಲಯದಿಂದ ನಿರ್ದಿಷ್ಟ ಆದೇಶ ಅಗತ್ಯವಾಗಿತ್ತು ಎಂದು ತಿಳಿಸಿತು.

ನ್ಯಾಯಾಂಗದ ಆದೇಶ ಇಲ್ಲದೇ ಹೋದಲ್ಲಿ, ಬಂಧನಕ್ಕೆ ತಡೆ ನೀಡುವಂತಹ ಹೈಕೋರ್ಟ್‌ ಆದೇಶದ ಅಧಿಕೃತ ದಾಖಲೆಯು ತನಿಖಾಧಿಕಾರಿಗೂ ಸಿಗುವುದಿಲ್ಲ ಎಂದು ಹೇಳಿತು.

ಸಲೀಂಭಾಯಿ ಮೆನನ್‌ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಗುಜರಾತ್‌ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗಲೇ ಆತನ ಬಂಧನವಾಗಿತ್ತು.

ವಿಚಾರಣೆ ಆರಂಭವಾದಾಗ, ವಾದಿ–ಪ್ರತಿವಾದಿಗಳ ವಕೀಲರಿಗೆ ರಾಜಿ ಸಾಧ್ಯತೆಯ ಅವಕಾಶವನ್ನುಹೈಕೋರ್ಟ್‌ ಕಲ್ಪಿಸಿತ್ತು. ಅದರ ಆಧಾರದ ಮೇಲೆ ಆರೋಪಿಗೆ ಬಂಧನದಿಂದ ರಕ್ಷಣೆ ನೀಡಿ ಮೌಖಿಕ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.