ADVERTISEMENT

ಕೇರಳ: ಜಿಯೊ ಅರ್ಜಿ ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 13:30 IST
Last Updated 27 ಜನವರಿ 2026, 13:30 IST
ಜಿಯೊ ಸ್ಟಾರ್‌
ಜಿಯೊ ಸ್ಟಾರ್‌   

ನವದೆಹಲಿ: ಕೇರಳದ ಕೇಬಲ್‌ ಟೆಲಿವಿಷನ್‌ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ನಡೆಸುತ್ತಿರುವ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ರಿಲಯನ್ಸ್ ಇಂಡಸ್ಟ್ರೀಸ್‌ ಮಾಲೀಕತ್ವದ ‘ಜಿಯೊಸ್ಟಾರ್‌’ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

‘ಈ ವಿಷಯವು ಪ್ರಾಥಮಿಕ ಹಂತದಲ್ಲಿದೆ. ಸಿಸಿಐ ತನ್ನ ತನಿಖೆಯನ್ನು ಮುಂದುವರಿಸಬಹುದು’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಸಂದೀಪ್‌ ಮೆಹ್ತಾ ಅವರ ನ್ಯಾಯಪೀಠ ತಿಳಿಸಿತು.

‘ಕ್ಷಮಿಸಿ. ಸಿಸಿಐ ತನ್ನ ತನಿಖೆಯನ್ನು ನಿರ್ವಹಿಸಲಿ. ಈ ವಿಚಾರವು ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ, ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಜಿಯೊಸ್ಟಾರ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಅವರಿಗೆ ತಿಳಿಸಿತು. 

ADVERTISEMENT

‘ಜಿಯೊ ಹಾಟ್‌ಸ್ಟಾರ್‌ ಭಾರತೀಯ ಟೆಲಿಕಾಂ ಪ್ರಾಧಿಕಾರ ಕಾಯ್ದೆ–1997ರ ಅಡಿಯಲ್ಲಿ ಬದ್ಧವಾಗಿದ್ದು, ಎಷ್ಟು ಶುಲ್ಕ ವಿಧಿಸಬಹುದು, ಎಷ್ಟು ರಿಯಾಯಿತಿ ನೀಡಬಹುದು ಎಂಬುದನ್ನು ನಿರ್ಧರಿಸುತ್ತದೆ’ ಎಂದು ರೋಹ್ಟಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. 

‘ಬೇರೆ ನಿಯಂತ್ರಣ ಪ್ರಾಧಿಕಾರಕ್ಕೆ ಸಂಬಂಧಿಸಿದ ತನಿಖೆಯನ್ನು ನೀವು ಮಾಡಬಹುದೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ಬಾಂಬೆ ಹೈಕೋರ್ಟ್‌ ನೀಡಿದ ತೀರ್ಪು ಕೂಡ ನಮ್ಮ ಪರವಾಗಿದೆ’ ಎಂದು ತಿಳಿಸಿದರು.

ರೋಹ್ಟಗಿ ವಾದ ಪರಿಗಣಿಸಿದ ನ್ಯಾಯಮೂರ್ತಿ ಪಾರ್ದಿವಾಲಾ, ‘ಈ ವಿಷಯವನ್ನು ಪರಿಗಣಿಸಬೇಕಿದೆ’ ಎಂದು ಹೇಳಿದರು.

ಕೇರಳದ ದೂರದರ್ಶನ ಪ್ರಸಾರ ಕ್ಷೇತ್ರದಲ್ಲಿ ‘ಜಿಯೊ ಸ್ಟಾರ್‌’ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದು, ತಾರತಮ್ಯದ ರಿಯಾಯಿತಿ ನೀಡುವ ಮೂಲಕ ‘ಸ್ಪರ್ಧಾ ಕಾಯ್ದೆ 2002 ಅನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿ ಏಷ್ಯಾನೆಟ್‌ ನೆಟ್‌ವರ್ಕ್‌ ಲಿಮಿಟೆಡ್‌, ಸಿಸಿಐಗೆ ದೂರು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.