ADVERTISEMENT

ಡಿಜಿಟಲ್‌ ಅರೆಸ್ಟ್ ವಿರುದ್ಧ ಕಠಿಣ ಕಾನೂನು: ಸುಪ್ರೀಂ ಕೋರ್ಟ್‌

₹3 ಸಾವಿರ ಕೋಟಿ ಸುಲಿಗೆ: ಕೇಂದ್ರ ಗೃಹ ಸಚಿವಾಲಯ, ಸಿಬಿಐದಿಂದ ಕೋರ್ಟ್‌ಗೆ ವರದಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 19:50 IST
Last Updated 3 ನವೆಂಬರ್ 2025, 19:50 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ (ಪಿಟಿಐ): ‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ದೇಶದ ಜನರನ್ನು ಬೆದರಿಸಿ ₹3,000 ಕೋಟಿಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿವೆ. ಈ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ‘ಈ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ’ ಎಂದು ಹೇಳಿದೆ.

ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್‌ ಅರೆಸ್ಟ್‌’ನಲ್ಲಿ ₹1.5 ಕೋಟಿ ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. 

ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಇಂಥ ಪ್ರಕರಣಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಅ.27ರಂದು ನಡೆದ ವಿಚಾರಣೆ ವೇಳೆ ಸೂಚನೆ ನೀಡಿತ್ತು. ಇದರಂತೆ, ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿವೆ.

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌, ಉಜ್ಜಲ್‌ ಭುಯಾನ್‌ ಮತ್ತು ಜಾಯ್‌ ಮಾಲ್ಯಾ ಬಾಗ್ಚಿ ಅವರಿರುವ ಪೀಠವು ಈ ವರದಿಯನ್ನು ಪರಿಶೀಲಿಸಿತು. ‘ಗೃಹ ಸಚಿವಾಲಯ ಮತ್ತು ಸಿಬಿಐ ವರದಿಯನ್ನು ಪರಿಶೀಲಿಸಿ ನಮ್ಮ ಕಚೇರಿಯು ಸಣ್ಣ ವರದಿಯೊಂದನ್ನು ಸಿದ್ಧಪಡಿಸಿದೆ’ ಎಂದು ಪೀಠ ತಿಳಿಸಿತು.

‘ಡಿಜಿಟಲ್‌ ಅರೆಸ್ಟ್‌’ ಎನ್ನವುದು ನಾವು ಅಂದುಕೊಂಡಿದ್ದಕ್ಕಿಂತ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವರದಿಯನ್ನು ನೋಡಿದರೆ ದಿಗಿಲಾಗುತ್ತಿದೆ ಎಂದರು.

ಅಲ್ಲದೇ ‘ಭಾರತವೊಂದರಲ್ಲಿಯೇ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ ಎಂದರೆ, ವಿದೇಶಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಏನಿರಬಹುದು’ ಎಂದು ನ್ಯಾ. ಸೂರ್ಯ ಕಾಂತ್‌ ದಿಗ್ಬ್ರಮೆ ವ್ಯಕ್ತಪಡಿಸಿದರು.

ಅಮಿಕಸ್‌ ಕ್ಯೂರಿ ನೇಮಕ: ಸೈಬರ್‌ ಅಪರಾಧ, ಪ್ರಮುಖವಾಗಿ ‘ಡಿಜಿಟಲ್‌ ಅರೆಸ್ಟ್‌’ ಹೆಸರಿನ ವಂಚನೆ ನಿಯಂತ್ರಣ ಕುರಿತು ನ್ಯಾಯಾಲಯಕ್ಕೆ ಸಲಹೆ ಮತ್ತು ಸಹಕಾರ ನೀಡಲು ಅಮಿಕಸ್‌ ಕ್ಯೂರಿಯನ್ನು ನೇಮಿಸಲಾಗುವುದು ಎಂದು ಪೀಠ ಹೇಳಿತು. ಹಿರಿಯ ವಕೀಲೆ, ಸೈಬರ್‌ ಕಾನೂನು ತಜ್ಞೆ ಎನ್‌.ಎಸ್‌. ನಪ್ಪಿನಾಯ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತು. ಸೈಬರ್‌ ಅಪರಾಧಗಳಿಗೆ ಸಂಬಂಧಿಸಿ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ‘ಸೈಬರ್‌ ಸಾಥಿ’ ಎಂಬ ವೆಬ್‌ಸೈಟ್‌ ಅನ್ನೂ ಇವರು ಸ್ಥಾಪಿಸಿದ್ದಾರೆ.

‘ಕೇಂದ್ರ ಗೃಹ ಸಚಿವಾಲಯದಲ್ಲಿ ಪ್ರತ್ಯೇಕ ತಂಡವೊಂದು ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕೆಲಸ ಮಾಡುತ್ತಿದೆ, ಬೇಕಾದ ಕ್ರಮಗಳನ್ನೂ ಕೈಗೊಂಡಿದೆ’ ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಪೀಠಕ್ಕೆ ತಿಳಿಸಿದರು. ಅಮಿಕಸ್‌ ಕ್ಯೂರಿ ಅವರಿಂದ ಸಲಹೆ ಪಡೆದ ಬಳಿಕ ಕೆಲವು ಮಾರ್ಗಸೂಚಿಗಳನ್ನು ನೀಡುವುದಾಗಿ ಹೇಳಿದ ಪೀಠವು, ಮುಂದಿನ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.

‘ಕಠಿಣ ಆದೇಶವೇ ಬೇಕು’

ಜನರಿಂದ ₹3 ಸಾವಿರ ಕೋಟಿ ಸುಲಿಗೆ ಮಾಡಲಾಗಿದೆ ಎನ್ನುವುದು ಆಘಾತಕಾರಿಯಾದುದು. ವೃದ್ಧರನ್ನೇ ಗುರಿ ಮಾಡುತ್ತಿರುವುದು ಕೂಡ ಆಘಾತಕಾರಿಯೇ ಆಗಿದೆ. ಒಂದೇ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣ ವರದಿಯಾಗುತ್ತಿವೆ ಎಂದರೆ ಏನು? ಈ ಬಗ್ಗೆ ನಾವು ಕಠಿಣವಾದ ಮತ್ತು ಕಟ್ಟುನಿಟ್ಟಿನ ಆದೇಶ ನೀಡಲಿಲ್ಲವಾದರೆ ಸಮಸ್ಯೆಯು ಉಲ್ಬಣಿಸುತ್ತದೆ. ನಮ್ಮ ಆದೇಶಗಳ ಮೂಲಕ ನಮ್ಮ ತನಿಖಾ ಸಂಸ್ಥೆಗಳಿಗೆ ಬಲ ತುಂಬಲೇಬೇಕಾಗಿದೆ

-ಸುಪ್ರೀಂ ಕೋರ್ಟ್‌

- ‘ಸ್ಕ್ಯಾಮ್‌ ಕಾಂಪೌಂಡ್ಸ್‌’ಗಳ ಕಾರ್ಯಾಚರಣೆ ‘

ಆಗ್ನೇಯ ಏಷ್ಯಾ ಭಾಗದಲ್ಲಿನ ಕೆಲವು ದೇಶಗಳಲ್ಲಿ ಸೈಬರ್‌ ಅಪರಾಧ ಎಸಗಲು ದೊಡ್ಡ ಮಟ್ಟದ ಕೇಂದ್ರಗಳನ್ನು (ಸ್ಕ್ಯಾಮ್‌ ಕಾಂಪೌಂಡ್ಸ್‌) ಸ್ಥಾಪಿಸಲಾಗಿದೆ. ಅಲ್ಲಿಂದಲೇ ಸೈಬರ್‌ ಅಪರಾಧ ಸಿಂಡಿಕೇಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸಿಬಿಐ ಗುರುತಿಸಿದೆ’ ಎಂದು ನ್ಯಾ. ಸೂರ್ಯ ಕಾಂತ್‌ ಹೇಳಿದರು. ‘ಈ ಕೇಂದ್ರಗಳಲ್ಲಿ ಆರ್ಥಿಕ ತಾಂತ್ರಿಕವಾದ ಎಲ್ಲ ಸೌಲಭ್ಯಗಳೂ ಇವೆ. ಜೊತೆಗೆ ಇಂಥ ಸಿಂಡಿಕೇಟ್‌ಗಳನ್ನು ನಿರ್ವಹಿಸಲು ಜನರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.