ADVERTISEMENT

ದೆಹಲಿ: ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ದೆಹಲಿಯ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸಲು ನಿರ್ದೇಶನ

ಪಿಟಿಐ
Published 12 ಆಗಸ್ಟ್ 2025, 0:01 IST
Last Updated 12 ಆಗಸ್ಟ್ 2025, 0:01 IST
   

ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ ಎಂದು ಸುಪ್ರೀಂ ಕೋರ್ಟ್‌ ಅಧಿಕಾರಿಗಳಿಗೆ ಸೋಮವಾರ ನಿರ್ದೇಶನ ನೀಡಿದೆ.

ಬೀದಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಆ ನಾಯಿಗಳು ಮತ್ತೆ ಬೀದಿಗೆ ಬರಕೂಡದು ಎಂದು ತಾಕೀತು ಮಾಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್‌.ಮಹಾದೇವನ್‌ ಅವರ ನೇತೃತ್ವದ ನ್ಯಾಯಪೀಠವು ಅಧಿಕಾರಿಗಳಿಗೆ ಈ ರೀತಿಯ ಕೆಲವು ಸೂಚನೆಗಳನ್ನು ನೀಡಿತು.

ADVERTISEMENT

ಇದೇ ಸಂದರ್ಭದಲ್ಲಿ ನ್ಯಾಯಾಲಯದ ಆದೇಶ ಪಾಲನೆ ಕಾರ್ಯಕ್ಕೆ ಅಡ್ಡಿ ಉಂಟುಮಾಡುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದೆ.

ಪಾಣಿ ಸಂರಕ್ಷಣೆ ಕಾರ್ಯಕರ್ತರು ಮತ್ತು ‘ಪ್ರಾಣಿ ಪ್ರೇಮಿಗಳು’ ಎಂದು ಕರೆಸಿಕೊಳ್ಳುವವರಿಗೆ ರೇಬಿಸ್‌ಗೆ ಬಲಿಯಾದ ಮಕ್ಕಳನ್ನು ಮರಳಿ ತಂದುಕೊಡಲು ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ನಾಯಿಗಳ ಸೆರೆಹಿಡಿಯುವ ಕಾರ್ಯವನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದು ಅಧಿಕಾರಿಗಳಿಗೆ ಬಿಟ್ಟಿದ್ದು. ನಗರ ಮತ್ತು ನಗರದ ಹೊರವಲಯವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವುದು ಮೊಟ್ಟ ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿತು.

ಆರು ತಿಂಗಳ ಬಳಿಕ ಮತ್ತೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.

ಬೀದಿ ನಾಯಿ ಹಾವಳಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್‌ ಹೆಚ್ಚಾಗಿರುವ ಕಾರಣ ಜುಲೈ 28ರಂದು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.

ಕಾಲಮಿತಿಯ ಒಳಗಾಗಿ ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ ಆದೇಶವನ್ನು ಅನುಷ್ಠಾನ ಮಾಡಲಿದೆ
ಕಪಿಲ್‌ ಮಿಶ್ರಾ ಆಶ್ರಮ ಮನೆ ಅಭಿವೃದ್ಧಿ ಸಚಿವ
ದೆಹಲಿಯಲ್ಲಿ 3 ಲಕ್ಷ ನಾಯಿಗಳಿವೆ. ಅವುಗಳ ಸ್ಥಳಾಂತರ ಮತ್ತು ನಿರ್ವಹಣೆಗಾಗಿ ಸುಮಾರು ₹15000 ಕೋಟಿ ವೆಚ್ಚವಾಗಲಿದೆ. ದೆಹಲಿ ಸರ್ಕಾರದ ಬಳಿ ಇಷ್ಟು ಹಣ ಇದೆಯೇ?
ಮನೇಕಾ ಗಾಂಧಿ ಪ್ರಾಣಿಗಳ ಹಕ್ಕು ಹೋರಾಟಗಾರ್ತಿ ಮಾಜಿ ಕೇಂದ್ರ ಸಚಿವೆ

ಕೋರ್ಟ್‌ ಹೇಳಿದ್ದೇನು?

lಗುರುಗ್ರಾಮ, ನೊಯಿಡಾ ಮತ್ತು ಗಾಜಿಯಾಬಾದ್‌ನಲ್ಲಿ ದೆಹಲಿ ಸರ್ಕಾರ ಮತ್ತು ಸ್ಥಳೀಯ ಸ್ಥಂಸ್ಥೆಗಳು ನಿರ್ಮಿಸಿರುವ ಆಶ್ರಯ ಕೇಂದ್ರಗಳಿಗೆ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು

lಈ ಆಶ್ರಯ ಕೇಂದ್ರಗಳಲ್ಲಿ ನಾಯಿಗಳ ಕಾಳಜಿಗಾಗಿ ಸಿಬ್ಬಂದಿ ನೇಮಿಸಬೇಕು

lಈ ಕೇಂದ್ರಗಳನ್ನು ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲಿನಲ್ಲಿ ಇಡಬೇಕು

lಸ್ಥಳಾಂತರಿಸುವ ನಾಯಿಗಳ ಕುರಿತ ಅಂಕಿಅಂಶವನ್ನು ದಾಖಲಿಸಬೇಕು ಮತ್ತು ಅದನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು

lನಾಯಿ ಕಡಿತ ಪ್ರಕರಣದ ಬಗ್ಗೆ ವರದಿಗಾಗಿ ವಾರದ ಒಳಗಾಗಿ ಸಹಾಯವಾಣಿ ಆರಂಭಿಸಬೇಕು. ದೂರು ದಾಖಲಾದ ನಾಲ್ಕು ಗಂಟೆಗಳ ಒಳಗಾಗಿ ನಾಯಿಯನ್ನು ಹಿಡಿಯಬೇಕು

lರೇಬಿಸ್‌ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಬೇಕು

ಮಹಾದೇವಿ ಆನೆ ಸ್ಥಳಾಂತರ: ಗುರುವಾರ ‘ಸುಪ್ರೀಂ’ನಲ್ಲಿ ಅರ್ಜಿ ವಿಚಾರಣೆ

ಮಹಾರಾಷ್ಟ್ರದ ಕೊಲ್ಹಾಪುರದ ಜೈನ ಮಠದ ಆನೆ ‘ಮಹಾದೇವಿ’ (30)ಯನ್ನು ಗುಜರಾತ್‌ನ ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸುವ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್‌, ಎ.ಎಸ್‌ ಚಂದುಕರ್‌ ಅವರನ್ನೊಳ‌ಗೊಂಡ ನ್ಯಾಯಪೀಠವು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.