ನವದೆಹಲಿ: ಅಗತ್ಯ ವಸ್ತುಗಳನ್ನು ಹೊತ್ತು ದೆಹಲಿ ಪ್ರವೇಶಿಸುವ ಸರಕು ವಾಹನಗಳಿಗೆ ನೀಡಿದ್ದ ‘ಪರಿಸರ ಪರಿಹಾರ ತೆರಿಗೆ’ (ಸೆಸ್) ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಎನ್.ವಿ.ಅಂಜಾರಿಯಾ ಅವರು ಇದ್ದ ಪೀಠವು ಸೆಪ್ಟೆಂಬರ್ 26ರಂದು ಈ ಆದೇಶ ನೀಡಿದೆ.
2015ರಲ್ಲಿ ಕೋರ್ಟ್ ನೀಡಿದ್ದ ವಿನಾಯಿತಿಯನ್ನು ಹಿಂಪಡೆಯುವಂತೆ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ಮನವಿ ಮಾಡಿತ್ತು. ತರಕಾರಿ, ಹಣ್ಣು, ಹಾಲು ಸೇರಿದಂತೆ ಇತರೆ ಅತ್ಯಗತ್ಯ ವಸ್ತುಗಳನ್ನು ಸಾಗಿಸುವ ಭಾರಿ ವಾಣಿಜ್ಯ ವಾಹನಗಳಿಗೆ ನೀಡಿರುವ ವಿನಾಯಿತಿಯು ‘ಹಲವು ಕಾರ್ಯಾಚರಣೆಯ ತೊಡಕು’ಗಳಿಗೆ ಕಾರಣವಾಗಿದೆ ಎಂದು ಕಾರಣ ನೀಡಿತ್ತು.
ಅಗತ್ಯ ಸರಕುಗಳನ್ನು ಸಾಗಿಸುತ್ತಿವೆಯೇ, ಇಲ್ಲವೇ? ಎಂಬ ತಪಾಸಣೆಗೆ ತುಂಬಾ ಹೊತ್ತಿನವರೆಗೆ ವಾಹನಗಳನ್ನು ಒಂದೆಡೆ ನಿಲ್ಲಿಸಬೇಕು. ಅವು ನಿರಂತರವಾಗಿ ಹೊಗೆ ಉಗುಳುತ್ತವೆ. ಇದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
‘ಪಾಲಿಕೆ ಹೇಳಿರುವ ಅಂಶಗಳು ಸಮರ್ಪಕವಾಗಿವೆ. ಅಲ್ಲದೇ ಸದ್ಯ ವಿಧಿಸಿರುವ ತೆರಿಗೆಯು ಗ್ರಾಹಕರಿಗೆ ಹೊರೆಯಾಗುವ ಮಟ್ಟಕ್ಕೆ ವಸ್ತುಗಳ ಬೆಲೆ ಏರಿಕೆ ಮಾಡುವಷ್ಟೇನೂ ಇಲ್ಲ. ಹೀಗಾಗಿ ಪಾಲಿಕೆ ಅರ್ಜಿಯನ್ನು ಪರಿಗಣಿಸಿದ್ದೇವೆ’ ಎಂದು ಪೀಠ ಹೇಳಿತು.
ಹಸಿರು ಪಟಾಕಿಗೂ ಸಮ್ಮತಿ: ಇದೇ ವೇಳೆ, ಪರವಾನಗಿ ಪಡೆದ ಉತ್ಪಾದಕರು ಹಸಿರು ಪಟಾಕಿಗಳ ತಯಾರಿಕೆ ಮಾಡಲು ಪೀಠವು ಷರತ್ತುಬದ್ಧ ಅನುಮತಿ ನೀಡಿತು. ಅಲ್ಲದೆ, ದೆಹಲಿಯಲ್ಲಿ ಅನುಮತಿ ಇಲ್ಲದೇ ಪಟಾಕಿ ಮಾರಾಟ ಮಾಡಬಾರದು ಎನ್ನುವ ಷರತ್ತನ್ನೂ ವಿಧಿಸಿತು.
ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧದ ಕುರಿತು ನಿಗಾ ಇಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ ಪೀಠ, ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಗಳು ದೆಹಲಿ ಸರ್ಕಾರ, ಪಟಾಕಿ ತಯಾರಕರು, ಮಾರಾಟಗಾರರು ಸೇರಿದಂತೆ ಸಂಬಂಧಿಸಿದ ಎಲ್ಲರನ್ನೂ ಸಂಪರ್ಕಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.