ADVERTISEMENT

ಪಟಾಕಿ ನಿಷೇಧ ದೆಹಲಿ NCRಗಷ್ಟೇ ಏಕೆ ಸೀಮಿತ, ಇಡೀ ದೇಶಕ್ಕೂ ಅನ್ವಯಿಸಲಿ: SC

ಪಿಟಿಐ
Published 12 ಸೆಪ್ಟೆಂಬರ್ 2025, 11:11 IST
Last Updated 12 ಸೆಪ್ಟೆಂಬರ್ 2025, 11:11 IST
ಭಾರತೀಯ ಸುಪ್ರೀಂಕೋರ್ಟ್ – ಪಿಟಿಐ ಚಿತ್ರ
ಭಾರತೀಯ ಸುಪ್ರೀಂಕೋರ್ಟ್ – ಪಿಟಿಐ ಚಿತ್ರ   

ನವದೆಹಲಿ: ‘ಶುದ್ಧ ಗಾಳಿ ಎಂಬುದು ಕೇವಲ ಗಣ್ಯ ವ್ಯಕ್ತಿಗಳ ಹಕ್ಕಾದರೆ, ಅದು ದೇಶದಲ್ಲಿರುವ ಪ್ರತಿಯೊಬ್ಬರ ನಾಗರಿಕರಿಗೂ ಸಿಗಬೇಕು. ಹೀಗಾಗಿ ದೆಹಲಿ–ಎನ್‌ಸಿಆರ್‌ಗಷ್ಟೇ ನಿಷೇಧವಾಗಿರುವ ಪಟಾಕಿಯನ್ನು ಇಡೀ ದೇಶಕ್ಕೂ ಏಕೆ ವಿಸ್ತರಿಸಬಾರದು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಯಂತ್ರಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಕೆ.ವಿನೋದ ಚಂದ್ರನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಎನ್‌ಸಿಆರ್‌ನಲ್ಲಿರುವ ನಗರಗಳು ಶುದ್ಧ ಗಾಳಿಗೆ ಅರ್ಹವಾಗಿದ್ದರೆ, ಇತರ ನಗರಗಳ ಜನರು ಏಕೆ ಅರ್ಹರಲ್ಲ? ಅಲ್ಲಿ ಯಾವುದೇ ನೀತಿ ಅನುಸರಿಸಲಿ, ಅದು ಇಡೀ ಭಾರತವನ್ನು ಆಧಾರವಾಗಿಟ್ಟುಕೊಂಡು ರೂಪಿಸಬೇಕು. ದೆಹಲಿಯಲ್ಲಿ ಗಣ್ಯ ವ್ಯಕ್ತಿಗಳಿದ್ದಾರೆ ಎಂದು ಅದಕ್ಕಾಗಿಯೇ ವಿಶೇಷ ಕಾನೂನು, ನೀತಿಗಳನ್ನು ರಚಿಸುವಂತಿಲ್ಲ’ ಎಂದು ಪೀಠ ಹೇಳಿತು

ADVERTISEMENT

‘ನಾನು ಕಳೆದ ಚಳಿಗಾಲದಲ್ಲಿ ಅಮೃತಸರದಲ್ಲಿದ್ದೆ. ಅಲ್ಲಿನ ಮಾಲಿನ್ಯ ದೆಹಲಿಗಿಂತ ಕೆಟ್ಟದಾಗಿತ್ತು. ಪಟಾಕಿಗಳನ್ನು ನಿಷೇಧಿಸಬೇಕಾದರೆ, ದೇಶದಾದ್ಯಂತ ಅವುಗಳನ್ನು ನಿಷೇಧಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

ಅಮಿಕಸ್ ಕ್ಯೂರಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ವಾದ ಮಂಡಿಸಿ, ‘ಗಣ್ಯರು ಅವರ ಆರೋಗ್ಯ ಕಾಳಜಿ ಮಾಡಿಕೊಳ್ಳುತ್ತಾರೆ. ಇಲ್ಲಿ ಮಾಲಿನ್ಯ ಹೆಚ್ಚಾದರೆ ಅವರು ದೆಹಲಿಯಿಂದ ದೂರ ಹೋಗುತ್ತಾರೆ’ ಎಂದರು.

ಗಾಳಿಯ ಗುಣಮಟ್ಟ ನಿರ್ವಹಣೆ ಆಯೋಗದಿಂದ ಹವಾಮಾನ ವರದಿಯನ್ನು ತರಿಸುವಂತೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ಅವರಿಗೆ ಪೀಠ ಸೂಚಿಸಿತು.

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು (NEERI) ಹಸಿರು ಪಟಾಕಿ ಕುರಿತು ಸಂಶೋಧನೆ ನಡೆಸಿದ್ದು, ಅವು ಹೇಗೆ ಮಾಲಿನ್ಯ ನಿಯಂತ್ರಣಕ್ಕೆ ಕಾರಣವಾಗಲಿವೆ ಎಂಬುದರ ಕುರಿತು ಅಧ್ಯಯನ ನಡೆಸಿದೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ.

ಪಟಾಕಿ ತಯಾರಿಕೆಗೆ ನಿರ್ದಿಷ್ಟ ರಾಸಾಯನಿಕವನ್ನು NEERI ತಿಳಿಸಬೇಕು. ಅದರಂತೆಯೇ ಪಟಾಕಿ ಕೈಗಾರಿಕೆಗಳು ಪಾಲಿಸಲಿವೆ ಎಂದು ತಯಾರಕರ ಪರ ಹಾಜರಿದ್ದ ವಕೀಲರು ಪೀಠಕ್ಕೆ ತಿಳಿಸಿದರು.

ಕೆಲ ಪಕ್ಷಗಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕೆ. ಪರಮೇಶ್ವರ ಮಾತನಾಡಿ, ‘ನಿರ್ಬಂಧ ಒಂದೆಡೆಯಾದರೆ, ಕೆಲ ಮಾರಾಟಗಾರರ ಪರವಾನಗಿಯನ್ನು ಅಧಿಕಾರಿಗಳು ರದ್ಧಗೊಳಿಸಿದ್ದಾರೆ’ ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಪರವಾನಗಿ ರದ್ದುಪಡಿಸುವ ವಿಷಯದಲ್ಲಿ ಅಧಿಕಾರಿಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಸೆ. 22ಕ್ಕೆ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.