ADVERTISEMENT

ವಿದ್ಯಾರ್ಥಿ ಆತ್ಮಹತ್ಯೆ ತಪ್ಪಿಸಿ: 15 ಅಂಶಗಳ ಮಾರ್ಗಸೂಚಿ ರೂಪಿಸಲು SC ನಿರ್ದೇಶನ

ಪಿಟಿಐ
Published 25 ಜುಲೈ 2025, 16:13 IST
Last Updated 25 ಜುಲೈ 2025, 16:13 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ದೇಶದಾದ್ಯಂತ ಜಾರಿಯಾಗುವ ಮಾರ್ಗಸೂಚಿಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ.

‘ಶಿಕ್ಷಣ ಸಂಸ್ಥೆಗಳು, ಕೋಚಿಂಗ್‌ ಸೆಂಟರ್‌ಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ಪರಿಸರಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟುವಿಕೆಗೆ ದೇಶದಲ್ಲಿ ಶಾಸನ ಮತ್ತು ನಿಯಂತ್ರಣ ವ್ಯವಸ್ಥೆ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಗೊಂಡ ಪೀಠ ಹೇಳಿದೆ.

ಸಂಬಂಧಪಟ್ಟ ಪ್ರಾಧಿಕಾರವು ಸೂಕ್ತ ಕಾನೂನು ಅಥವಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವವರೆಗೂ ತಾನು ಹೊರಡಿಸಿರುವ 15 ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ ಎಂದು ಪೀಠವು ಸ್ಪಷ್ಟಪಡಿಸಿದೆ.

ADVERTISEMENT

ಉಮ್ಮೀದ್ ಕರಡು ಮಾರ್ಗಸೂಚಿಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಜಾರಿಯಲ್ಲಿರುವ ‘ಮನೋದರ್ಪಣ’ ಕಾರ್ಯಕ್ರಮ ಮತ್ತು ಆತ್ಮಹತ್ಯೆ ತಡೆ ರಾಷ್ಟ್ರೀಯ ಕಾರ್ಯತಂತ್ರದಲ್ಲಿರುವ ಅಂಶಗಳನ್ನು ಪಡೆದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಏಕರೂಪದ ನೀತಿಯನ್ನು ಅಳವಡಿಸಿಕೊಳ್ಳಲು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿದೆ.

ಈ ನೀತಿಯನ್ನು ಪ್ರತಿವರ್ಷವೂ ಪರಿಶೀಲಿಸಿ ಪರಿಷ್ಕರಿಸಲಾಗುತ್ತದೆ ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳು ಹಾಗೂ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದು ಹೇಳಿದೆ.

ಕೋವಿಡ್-19 ಸಮಯದಲ್ಲಿ ಹಾಗೂ ಆ ಬಳಿಕ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಶಿಕ್ಷಣ ಸಚಿವಾಲಯವು ‘ಮನೋದರ್ಪಣ’ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ 2023ರಲ್ಲಿ ‘ಉಮ್ಮೀದ್’ ಕಾರ್ಯಕ್ರಮ ಪ್ರಾರಂಭಿಸಿದೆ ಎಂದು ಪೀಠವು ತಿಳಿಸಿದೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ವಿಶಾಖಪಟ್ಟಣದಲ್ಲಿ ಸಿದ್ಧತೆ ನಡೆಸುತ್ತಿದ್ದ 17 ವರ್ಷ ವಯಸ್ಸಿನ ವಿದ್ಯಾರ್ಥಿಯ ಅಸಹಜ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಮನವಿಯನ್ನು ಆಂಧ್ರ ಪ್ರದೇಶ ಹೈಕೋರ್ಟ್‌ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ತೆಗೆದುಕೊಂಡಿರುವ ಕ್ರಮಗಳು ಮತ್ತು ಇದರ ಮೇಲ್ವಿಚಾರಣೆಗೆ ಮಾಡಿರುವ ವ್ಯವಸ್ಥೆಗಳನ್ನು ವಿವರಿಸುವ ಅಫಿಡವಿಟ್‌ ಅನ್ನು 90 ದಿನಗಳ ಒಳಗೆ ಸಲ್ಲಿಸುವಂತೆ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. 

ವಿದ್ಯಾರ್ಥಿಯ ಅಸಹಜ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.