
ನವದೆಹಲಿ: ‘ವೈವಾಹಿಕ ವಿವಾದಗಳು ಸಮಾಜದ ರಚನೆಯ ಮೇಲೆ ತಕ್ಷಣವೇ ಪರಿಣಾಮ ಬೀರುತ್ತವೆ. ಹೀಗಾಗಿ ಪತಿ, ಪತ್ನಿ ಕಠಿಣ ನಿಲುವು ತೆಗೆದುಕೊಳ್ಳುವುದಕ್ಕೂ ಮುನ್ನವೇ ವಿವಾದವನ್ನು ಪರಿಹರಿಸಲು ಸಂಬಂಧಪಟ್ಟ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದು ಎಲ್ಲರ ಕರ್ತವ್ಯ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಗಳವಾಡುವ ದಂಪತಿಗಳು ನ್ಯಾಯಾಲಯಗಳನ್ನು ‘ಯುದ್ಧಭೂಮಿ’ಯಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅದು ಎಚ್ಚರಿಕೆ ನೀಡಿದೆ.
ಇಂಥ ವಿವಾದಗಳನ್ನು ಬಗೆಹರಿಸಲು ಮೊಕದ್ದಮೆಗೂ ಮುನ್ನ ಮತ್ತು ಮೊಕದ್ದಮೆ ಆರಂಭವಾದ ಬಳಿಕವೂ ಮಧ್ಯಸ್ಥಿಕೆಯನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠ ಒತ್ತಿ ಹೇಳಿದೆ.
‘ಕಕ್ಷಿದಾರರು ಪರಸ್ಪರರ ವಿರುದ್ಧ ಮೊಕದ್ದಮೆ ಹೂಡಲು ಪ್ರಾರಂಭಿಸಿದಾಗ, ವಿಶೇಷವಾಗಿ ಕ್ರಿಮಿನಲ್ ಆರೋಪಗಳಿದ್ದಾಗ್ಯೂ ಮತ್ತೆ ಒಂದಾಗುವ ಸಾಧ್ಯತೆಗಳನ್ನು ತಳ್ಳಿಹಾಕಬಾರದು’ ಎಂದು ಪೀಠ ತಿಳಿಸಿದೆ.
ಮಹಿಳೆಯೊಬ್ಬರ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಕುರಿತು ಹೇಳಿದೆ. ವಿವಾಹದ ಬಳಿಕ 65 ದಿನಗಳು ಮಾತ್ರ ಒಟ್ಟಿಗೆ ಇದ್ದು, ಆ ನಂತರ ಪರಸ್ಪರ 40ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವುದನ್ನು ಪೀಠ ಗಮನಿಸಿತು. ಪರಿಸ್ಥಿತಿ ಕೈಮೀರಿದ್ದು ಸರಿಪಡಿಸಲಾಗದ ಹಂತಕ್ಕೆ ಬಂದಿದೆ ಎಂದು ಹೇಳಿದ ಪೀಠ, ಈ ದಂಪತಿ 2012ರಲ್ಲಿ ಆದ ವಿವಾಹವನ್ನು ರದ್ದುಗೊಳಿಸಿತು.
ಸುಳ್ಳು ಸಾಕ್ಷ್ಯಾಧಾರಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ರದ್ದುಗೊಳಿಸಿದ ಪೀಠವು, ದಶಕಕ್ಕೂ ಹೆಚ್ಚು ಕಾಲ ಮೊಕದ್ದಮೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ದಂಪತಿಗೆ ತಲಾ ₹ 10,000 ದಂಡ ವಿಧಿಸಿತು.
ದೇಶದ ಎಲ್ಲ ಜಿಲ್ಲೆಗಳಲ್ಲಿಯೂ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಕೇಂದ್ರಗಳಿವೆ. ಇವುಗಳಲ್ಲಿಯೇ ಹಲವು ಪ್ರಕರಣಗಳು ಇತ್ಯರ್ಥವಾಗಿ, ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದಾರೆ. ಕೌಂಟುಂಬಿಕ ಹಿಂಸಾಚಾರ, ಜೀವನಾಂಶ ಕುರಿತು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದರೂ ರಾಜಿ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಪೀಠ ಸೂಚಿಸಿದೆ.
ವೈವಾಹಿಕ ವಿವಾದಗಳು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೂ ಸಂಧಾನಕ್ಕೆ ಯತ್ನ ನಡೆಸಬೇಕು. ಕಕ್ಷಿದಾರರನ್ನು ಠಾಣೆಗಳಿಗೆ ಕರೆಯುವ ಬದಲು ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಪರಿಹಾರಕ್ಕೆ ಪ್ರಯತ್ನಿಸಬೆಕು. ಒಂದು ವೇಳೆ ಕಕ್ಷಿದಾರರನ್ನು ಬಂಧಿಸಿದರೆ ವಿವಾದ ಕಗ್ಗಂಟಾಗಿ, ಬಗೆಹರಿಯಲಾಗದ ಪರಿಸ್ಥಿತಿಗೆ ಬಂದು ಬಿಡುತ್ತದೆ. ಹೀಗಾಗಿ ಎಚ್ಚರದಿಂದ ಪರಿಹರಿಸಬೇಕು ಎಂದು ಕಿವಿಮಾತು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.