ADVERTISEMENT

ಮುಟ್ಟು: ಪುರಾವೆ ಒದಗಿಸಲು ಒತ್ತಾಯ; ಮನಃಸ್ಥಿತಿ ಪ್ರತಿಬಿಂಬಿಸುತ್ತದೆ–‘ಸುಪ್ರೀಂ’

ಮುಟ್ಟು: ಫೋಟೊ ತೆಗೆದು ಪುರಾವೆ ಒದಗಿಸಲು ಒತ್ತಾಯಿಸಿದ ಪ್ರಕರಣ

ಪಿಟಿಐ
Published 28 ನವೆಂಬರ್ 2025, 14:38 IST
Last Updated 28 ನವೆಂಬರ್ 2025, 14:38 IST
   

ನವದೆಹಲಿ: ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಮಹಿಳಾ ಸ್ವಚ್ಛತಾ ಕಾರ್ಮಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ತನಿಖೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ ಮತ್ತು ಇತರರ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ. 

ಮುಟ್ಟು ಆಗಿದೆ ಎಂಬುದನ್ನು ಸಾಬೀತುಪಡಿಸಲು ಖಾಸಗಿ ಅಂಗದ ಫೋಟೊ ತೋರಿಸಬೇಕು ಎಂದು ಮಹಿಳಾ ಸ್ವಚ್ಛತಾ ಕಾರ್ಮಿಕರನ್ನು ಒತ್ತಾಯಪಡಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್‌.ಮಹಾದೇವನ್‌ ಅವರ ಪೀಠ ನಡೆಸುತ್ತಿದೆ.

‘ಇದು ವ್ಯಕ್ತಿಗಳ ಮನಃಸ್ಥಿತಿಯನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಮುಟ್ಟಿನ ರಜೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರಕರಣ ಗಮನಕ್ಕೆ ಬಂದ ಬಳಿಕ, ಅವರು ರಜೆ ನೀಡಲು ಮುಟ್ಟು ಆಗಿರುವುದರ ಪುರಾವೆ ಕೇಳುತ್ತಾರೆಯೇ ಎಂಬ ಭಾವನೆ ನನ್ನ ಮನಸ್ಸಿಗೆ ಬಂತು’ ಎಂದು ಬಿ.ವಿ.ನಾಗರತ್ನ ಹೇಳಿದರು.

ADVERTISEMENT

‘ಮುಟ್ಟು ಆಗಿರುವ ಕಾರಣ ಅವರಿಗೆ (ಮಹಿಳಾ ಸ್ವಚ್ಛತಾ ಕಾರ್ಮಿಕರಿಗೆ) ಆ ದಿನ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಬೇರೆ ಯಾರನ್ನಾದರೂ ನಿಯೋಜಿಸಬಹುದಿತ್ತು. ಈ ಅರ್ಜಿಯಿಂದ ಏನಾದರೂ ಒಳಿತು ಉಂಟಾಗಲಿದೆ ಎಂದು ನಾವು ಭಾವಿಸುತ್ತೇವೆ’ ಎಂದರು. 

‘ಇದೊಂದು ಗಂಭೀರ ಕ್ರಿಮಿನಲ್‌ ಪ್ರಕರಣವಾಗಿದ್ದು, ಗಮನಹರಿಸಬೇಕಾದ ವಿಷಯವಾಗಿದೆ’ ಎಂದು ಎಸ್‌ಸಿಬಿಎ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್‌ ಸಿಂಗ್‌ ವಾದಿಸಿದರು. ಈ ಅರ್ಜಿಯನ್ನು ಡಿ.15ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಏನಿದು ಘಟನೆ

ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಮಹಿಳಾ ಸ್ವಚ್ಛತಾ ಕಾರ್ಮಿಕರಿಗೆ, ಮೇಲ್ವಿಚಾರಕರು ಕಿರುಕುಳ ನೀಡಿದ ಘಟನೆ ಅಕ್ಟೋಬರ್‌ 26ರಂದು ನಡೆದಿತ್ತು. 

‘ಮುಟ್ಟಿನ ಕಾರಣ ನಮಗೆ ವೇಗವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿದೆವು. ಮುಟ್ಟು ಆಗಿರುವುದನ್ನು ಸಾಬೀತುಪಡಿಸಲು ಖಾಸಗಿ ಅಂಗದ ಫೋಟೊ ತೆಗೆದು ತೋರಿಸುವಂತೆ ಒತ್ತಾಯಿಸಿದರು. ನಾವು ನಿರಾಕರಿಸಿದಾಗ ನಿಂದಿಸಿ, ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಿದರು’ ಎಂದು ಆರೋಪಿಸಿ ಮೂವರು ಮಹಿಳಾ ಕಾರ್ಮಿಕರು ವಿ.ವಿ ಆಡಳಿತಕ್ಕೆ ದೂರು ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮೇಲ್ವಿಚಾರಕರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ವಿ.ವಿ ಪ್ರಕಟಣೆಯಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.