ಸುಪ್ರೀಂ ಕೋರ್ಟ್
ನವದೆಹಲಿ: ಗ್ರಾಹಕರ ಹಕ್ಕುಗಳ ರಕ್ಷಣೆಗೆ ಆದೇಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಯಾವುದೇ ಉತ್ಪನ್ನವನ್ನು ಖರೀದಿಸುವ ಗ್ರಾಹಕನಿಗೆ ಉತ್ಪನ್ನವನ್ನು ಮಾರಾಟ ಮಾಡುವ, ಉತ್ಪಾದಿಸುವ ಹಾಗೂ ವಿತರಿಸುವವರ ಮಾಹಿತಿಯನ್ನೂ ತಿಳಿದುಕೊಳ್ಳುವ ಹಕ್ಕು ಇದೆ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಸೂಚನೆ ನೀಡಿದೆ.
ಅಶ್ವಿನ್ ಕುಮಾರ್ ಉಪಾಧ್ಯಾಯ ಎಂಬವರು ಈ ಅರ್ಜಿ ಸಲ್ಲಿಸಿದ್ದಾರೆ. ‘ಪ್ರತೀ ಉತ್ಪನ್ನದ ಮಾರಾಟಗಾರರು, ವಿತರಕರು, ಮಳಿಗೆಯ ಮಾಲೀಕರು ತಮ್ಮ ನೋಂದಣಿ, ಹೆಸರು, ವಿಳಾಸವನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಈ ಮಾಹಿತಿಯನ್ನು ತಿಳಿಯುವುದು ಗ್ರಾಹಕನ ಹಕ್ಕು ಎಂದು ನ್ಯಾಯಾಲಯ ಘೋಷಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಉತ್ಪನ್ನಗಳ ಗುಣಮಟ್ಟ ಕಳಪೆ ಆಗಿದ್ದರೆ ಅಥವಾ ಉತ್ಪನ್ನಕ್ಕಾಗಿ ಹಣ ಪಡೆದು ಬಳಿಕ ಅವುಗಳನ್ನು ವಿತರಿಸದೇ ವಂಚಿಸಿದಲ್ಲಿ ಗ್ರಾಹಕರು ದೂರು ನೀಡುವುದಕ್ಕೆ ಇದರಿಂದ ಸಾಧ್ಯವಾಗಲಿದೆ. ಗ್ರಾಹಕರು ವಂಚನೆಗೆ ಒಳಗಾಗದಂತೆ ತಡೆಯಲು ಈ ಹಕ್ಕು ಪ್ರಮುಖ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.