ADVERTISEMENT

ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗರ್ಲಾನಿಗೆ ಸುಪ್ರೀಂ ಕೋರ್ಟ್ ನೋಟಿಸ್‌

ಪಂಚತಾರಾ ಪಾರ್ಟಿಗಳಿಗಾಗಿ ಮಾದಕ ವಸ್ತು ಖರೀದಿ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
ಸಂಜನಾ ಗರ್ಲಾನಿ
ಸಂಜನಾ ಗರ್ಲಾನಿ   

ನವದೆಹಲಿ: ಪಂಚತಾರಾ ಪಾರ್ಟಿಗಳಿಗಾಗಿ ದೇಶದಾದ್ಯಂತ ವಿವಿಧ ಸ್ಥಳಗಳಿಂದ ಮಾದಕ ವಸ್ತುಗಳನ್ನು ಖರೀದಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಟಿ ಅರ್ಚನಾ ಗರ್ಲಾನಿ ಅಲಿಯಾಸ್ ಸಂಜನಾ ಗರ್ಲಾನಿ ಮತ್ತು ಇತರರಿಗೆ ನೋಟಿಸ್‌ ಜಾರಿಗೆ  ಶುಕ್ರವಾರ ಆದೇಶಿಸಿದೆ.

2024ರ ಮಾರ್ಚ್ 25ರ ಹೈಕೋರ್ಟ್‌ ತೀರ್ಪಿನ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿ ಕುರಿತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ಸಂಜನಾ ಮತ್ತು ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಮತ್ತು ಆದಿತ್ಯ ಮೋಹನ್ ಅಗರ್ವಾಲ್ ಅವರಿಂದ ಪ್ರತಿಕ್ರಿಯೆ ಕೇಳಿದೆ.

ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪನ್ವರ್, ‘ಪ್ರತಿವಾದಿಯು ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ನೈಜೀರಿಯಾ ಪ್ರಜೆಯಿಂದ ಕೊಕೇನ್, ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ, ಪಾರ್ಟಿಗಳಲ್ಲಿ ಮಾರಾಟ ಮಾಡಿದ್ದಾರೆ’ ಎಂದು ವಾದಿಸಿದರು.

ADVERTISEMENT

‘ಸಂಜನಾ ಅವರು ಮಾದಕ ವಸ್ತುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿದ್ದರು. ಅವರು ಆಯೋಜಿಸಿದ್ದ ಪಾರ್ಟಿಗಳಲ್ಲಿ ಯುವಕರಿಗೆ ವಿತರಿಸಿದ್ದರು ಎಂಬುದಕ್ಕೆ ವಿವಿಧ ಸಾಕ್ಷ್ಯಗಳಿವೆ’ ಎಂದು ಹೇಳಿದರು.

ಆರೋಪಿಗಳು ಮಾದಕವಸ್ತು ವ್ಯಾಪಾರಿಗಳು, ನೈಜೀರಿಯಾದ ನಾಗರಿಕರೊಂದಿಗೆ ಸಂಪರ್ಕದಲ್ಲಿದ್ದು, ಕೊಕೇನ್, ಎಂಡಿಎಂಎ, ಎಲ್ಎಸ್‌ಡಿ ಮುಂತಾದ ಮಾದಕ ವಸ್ತುಗಳನ್ನು ಖರೀದಿಸಿದ್ದರು ಎಂಬುದನ್ನು ಮೊಬೈಲ್ ಫೋನ್‌ ಕರೆ ದಾಖಲೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಬಹಿರಂಗಪಡಿಸಿವೆ ಎಂದು ವಕೀಲರು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.