ನವದೆಹಲಿ: ಬೇಳೆಕಾಳುಗಳಿಗೆ ಪರ್ಯಾಯವಾಗಿ ಹಳದಿ ಬಟಾಣಿಯನ್ನು ಆಮದು ಮಾಡಿಕೊಳ್ಳುವ ಕ್ರಮದಿಂದ ರೈತರ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಲಿದ್ದು, ಹೀಗಾಗದಂತೆ ಆದೇಶಿಸಲು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಕೇಂದ್ರಕ್ಕೆ ಗುರುವಾರ ನೋಟಿಸ್ ನೀಡಿದೆ.
ಕಿಸಾನ್ ಮಹಾ ಪಂಚಾಯತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಸೂರ್ಯ ಕಾಂತ್, ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾ. ಎನ್. ಕೋಟೀಶ್ವರ ಸಿಂಗ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ‘ದೇಶದಲ್ಲಿ ಬೆಳೆಕಾಳುಗಳ ಉತ್ಪಾದನೆ ಸಾಕಷ್ಟು ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಹಳದಿ ಬಟಾಣಿಯು ಪ್ರತಿ ಕೆ.ಜಿ.ಗೆ ₹35ರಂತೆ ಸಿಗುತ್ತಿದೆ. ಇದರಿಂದ ಪ್ರತಿ ಕೆ.ಜಿ.ಗೆ ₹85ರಂತೆ ಕನಿಷ್ಠ ಬೆಂಬಲ ಬೆಲೆ ಪಡೆಯುತ್ತಿರುವ ತೊಗರಿ ಬೇಳೆ, ಹೆಸರುಬೇಳೆ ಮತ್ತು ಉದ್ದಿನ ಬೇಳೆ ಬೆಳೆಯುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದರು.
‘ತಜ್ಞರು ಈವರೆಗೂ ಹಲವು ವರದಿಗಳನ್ನು ಸಲ್ಲಿಸಿದ್ದಾರೆ. ಹಳದಿ ಬಟಾಣಿಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡದಂತೆ ಸರ್ಕಾರಕ್ಕೆ ಶಿಫಾರಸು ಕೂಡಾ ಮಾಡಲಾಗಿದೆ. ಕೃಷಿ ಸಚಿವಾಲಯ ಮತ್ತು ನೀತಿ ಆಯೋಗವೂ ಹಳದಿ ಬಟಾಣಿ ಆಮದಿಗೆ ವಿರೋಧ ವ್ಯಕ್ತಪಡಿಸಿದ್ದನ್ನೂ ಗಮನಿಸಬೇಕು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಹಳದಿ ಬಟಾಣಿಯ ಆಮದು ಮಾಡಿಕೊಳ್ಳದಂತೆ ಆದೇಶಿಸಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಕೇಂದ್ರಕ್ಕೆ ನೋಟಿಸ್ ನೀಡಲು ನಾವು ಸಿದ್ಧ. ಆದರೆ ಪ್ರಕರಣದ ಫಲಿತಾಂಶವು ಅಂತಿಮವಾಗಿ ಗ್ರಾಹಕರಿಗೆ ಹೊರೆಯಾಗಬಾರದು’ ಎಂದು ಅಭಿಪ್ರಾಯಪಟ್ಟಿತು.
‘ಒಂದೊಮ್ಮೆ ಹಳದಿ ಬಟಾಣಿ ಆಮದು ನಿಯಂತ್ರಿಸಿದರೆ, ದೇಶೀಯ ಮಾರುಕಟ್ಟೆಯಲ್ಲಿ ಬೆಳೆಕಾಳುಗಳ ಪೂರೈಕೆ ಕುಸಿಯಲಿದೆ. ಅದನ್ನು ತಪ್ಪಿಸಬೇಕು. ವಿದೇಶಗಳಲ್ಲಿ ಹಳದಿ ಬಟಾಣಿಯನ್ನು ಜಾನುವಾರುಗಳ ಮೇವಾಗಿ ಬಳಕೆಯಾಗುತ್ತಿದೆ ಎಂದಿದ್ದೀರಿ. ಆರೋಗ್ಯದ ಮೇಲೆ ಈ ಬಟಾಣಿಯ ಪರಿಣಾಮ ಕುರಿತು ಅಧ್ಯಯನ ಮಾಡಿದ್ದೀರಾ?’ ಎಂದು ಪೀಠ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಭೂಷಣ್', ‘ಹಳದಿ ಬಟಾಣೆಯಿಂದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮಗಳಾಗಿವೆ. ದೊಡ್ಡ ಪ್ರಮಾಣದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಪೀಠದ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.