ನವದೆಹಲಿ: ‘ಸಂವಿಧಾನ ರಚನಾಕಾರರ ಕಲ್ಪನೆಯಂತೆ ರಾಜ್ಯಪಾಲರು ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ನಡುವೆ ಸೌಹಾರ್ದ ಸಂಬಂಧ ಇದೆಯೇ’ ಎಂದು ಸುಪ್ರಿಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ಸದಸ್ಯರು ಇರುವ ಸಂವಿಧಾನ ಪೀಠವು, ರಾಜ್ಯಪಾಲರ ನೇಮಕ ಮತ್ತು ಅಧಿಕಾರ ಕುರಿತು ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸಿ, ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ಪ್ರಶ್ನೆ ಕೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮನಾಥ್, ಪಿ.ಎಸ್.ನರಸಿಂಹ ಹಾಗೂ ಎ.ಎಸ್.ಚಂದೂರ್ಕರ್ ಅವರು ಸಹ ಈ ಪೀಠದಲ್ಲಿದ್ದಾರೆ.
ಶಾಸನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡುವುದಕ್ಕೆ ಸಂಬಂಧಿಸಿ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟ್ ಸಲಹೆ ಕೇಳಿದ್ದಾರೆ. ಈ ಕುರಿತಂತೆ ಬುಧವಾರವೂ ವಿಚಾರಣೆ ಮುಂದುವರಿಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ,‘ಈ ವಿಚಾರಕ್ಕೆ ಸಂಬಂಧಿಸಿ ವಿವಿಧ ಸ್ತರಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇದರ ಹೊರತಾಗಿ ಅವಲೋಕಿಸಿದಾಗ, ರಾಜಕೀಯವಾಗಿ ಆಶ್ರಯ ಬೇಡುವವರಿಗಾಗಿ ರಾಜ್ಯಪಾಲರ ಹುದ್ದೆ ಸೃಷ್ಟಿಸಿಲ್ಲ. ರಾಜ್ಯಪಾಲರಿಗೆ ಇರುವ ಅಧಿಕಾರಗಳು ಹಾಗೂ ಜವಾಬ್ದಾರಿಗಳ ಕುರಿತು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದರು.
‘ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಒಕ್ಕೂಟ ವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡೇ ರಾಜ್ಯಪಾಲರ ನೇಮಕ ಹಾಗೂ ಅವರ ಪಾತ್ರ ಕುರಿತಂತೆ ಸಂವಿಧಾನರಚನಾ ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ’ ಎಂದೂ ಮೆಹ್ತಾ ಪೀಠಕ್ಕೆ ತಿಳಿಸಿದರು.
ರಾಜ್ಯಪಾಲ ಮತ್ತು ಸರ್ಕಾರ ಎರಡು ಶಕ್ತಿಕೇಂದ್ರಗಳಾಗಿದ್ದು ಅನೇಕ ವಿಷಯಗಳು ಕುರಿತು ಸಮಾಲೋಚನೆಗಳು ನಡೆಯುವ ಜೊತೆಗೆ ಈ ಎರಡು ‘ಶಕ್ತಿ ಕೇಂದ್ರ’ಗಳ ನಡುವೆ ಸೌಹಾರ್ದ ಸಂಬಂಧ ಇದೆಯೇ?– ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.