ನ್ಯಾಯಮೂರ್ತಿಗಳ ವಿರುದ್ಧದ ಆರೋಪ ಅನುಮತಿಸುವುದಿಲ್ಲ | ನ್ಯಾಯಧೀಶರ ಕೆಲಸವನ್ನು ಪ್ರಶ್ನಿಸುವುದು ‘ಗೊಂದಲದ ಪ್ರವೃತ್ತಿ’ | ಸಿಜೆಐ ಬಿ.ಆರ್ ಗವಾಯಿ ಅವರಿದ್ದ ಪೀಠ ಆದೇಶ
ನವದೆಹಲಿ: ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಾನಹಾನಿಕರ ಆರೋಪ ಮಾಡಿದ ಅರ್ಜಿದಾರ ಹಾಗೂ ಅವರ ವಕೀಲರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಮುಖ್ಯ ನ್ಯಾಯಧೀಶ (ಸಿಜೆಐ) ಬಿ.ಆರ್ ಗವಾಯಿ ಹಾಗೂ ನ್ಯಾಯಾಧೀಶರಾದ ಕೆ. ವಿನೋದ್ ಚಂದ್ರನ್ ಮತ್ತು ಅತುಲ್ ಎಸ್. ಚಂದೂರ್‌ಕರ ಅವರಿದ್ದ ಪೀಠವು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿತು. ‘ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳು ನ್ಯಾಯಾಂಗ ನಿಂದನೆಯಾಗಿದ್ದು, ಇದನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಹೇಳಿತು.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ವಿರುದ್ಧ ಪಕ್ಷಪಾತದ ಆರೋಪ ಮಾಡಿ ಎನ್.ಪೆಡ್ಡಿ ರಾಜು ಅವರು ಅರ್ಜಿ ಸಲ್ಲಿಸಿದ್ದಾರೆ.
‘ನ್ಯಾಯಮೂರ್ತಿಗಳನ್ನು ನಿಯಂತ್ರಿಸಲು ಹಾಗೂ ಅವರ ವಿರುದ್ಧ ಇಂತಹ ಆರೋಪ ಮಾಡುವುದನ್ನು ನಾವು ಅನುಮತಿಸುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳೂ ಸುಪ್ರೀಂ ಕೋರ್ಟ್ ನ್ಯಾಯಧೀಶರಂತೆಯೇ ಗೌರವ ಮತ್ತು ವಿನಾಯಿತಿ ಹೊಂದಿರುವ ಸಾಂವಿಧಾನಿಕ ಕಾರ್ಯಕರ್ತರು’ ಎಂದು ಸಿಜೆಐ ಗವಾಯಿ ಹೇಳಿದರು.
ಈಗಾಗಲೇ ವಿಲೇವಾರಿ ಮಾಡಿರುವ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್ ಮತ್ತೆ ಕೈಗೆತ್ತಿಕೊಳ್ಳಬೇಕು. ಕ್ಷಮಾದಾನವನ್ನು ನೀಡಬೇಕೆ ಬೇಡವೇ ಎಂಬುದನ್ನು ನ್ಯಾಯಧೀಶರು ಒಂದು ವಾರದೊಳಗೆ ನಿರ್ಧರಿಸುತ್ತಾರೆ ಎಂದು ಪೀಠ ಹೇಳಿತು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಸಂಜಯ್ ಹೆಗಡೆ ಅವರು ತಕ್ಷಣವೇ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.