
ನವದೆಹಲಿ: ‘ನ್ಯಾಯಾಂಗವು ವೈದ್ಯರ ಪರ ನಿಲ್ಲದಿದ್ದರೆ ಈ ಸಮಾಜ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಕೋವಿಡ್–19 ಸಂದರ್ಭದಲ್ಲಿ ಖಾಸಗಿ ವೈದ್ಯರು ಕೇವಲ ಹಣಕ್ಕಾಗಿಯೇ ಕೆಲಸ ಮಾಡಿದ್ದಾರೆ ಎನ್ನುವ ಟೀಕೆಗಳಿಗೆ ನ್ಯಾಯಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಕೋವಿಡ್ ಪಿಡುಗಿನ ವೇಳೆ ಕೆಲಸ ಮಾಡಿ, ಕೊನೆಗೆ ಕೋವಿಡ್‌ನಿಂದಲೇ ಮೃತಪಟ್ಟ ಖಾಸಗಿ ವೈದ್ಯರನ್ನು ವಿಮೆ ಪಾಲಿಸಿಗಳಲ್ಲಿ ಒಳಗೊಳ್ಳದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿತು.
‘ಪ್ರಧಾನ ಮಂತ್ರಿ ವಿಮೆ ಯೋಜನೆ ಜೊತೆಗೆ ಇಂಥ ಬೇರೆ ಯಾವ ಯಾವ ಯೋಜನೆಗಳಿವೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ಕೇಂದ್ರ ಸರ್ಕಾರಕ್ಕೆ ಪೀಠ ಸೂಚನೆ ನೀಡಿತು. ‘ನಾವು ಕೆಲವು ಮಾರ್ಗಸೂಚಿಗಳನ್ನು ನೀಡುತ್ತೇವೆ. ಇದರ ಆಧಾರದಲ್ಲಿ ವಿಮೆ ಹಣಕ್ಕಾಗಿ ಕ್ಲೇಮ್ ಮಾಡಿಕೊಳ್ಳಬಹುದು. ನಮ್ಮ ತೀರ್ಪಿನ ಆಧಾರದಲ್ಲಿ ಆದೇಶಗಳನ್ನು ರೂಪಿಸಿಕೊಳ್ಳುವುದು ವಿಮಾ ಕಂಪನಿಗಳಿಗೆ ಬಿಟ್ಟಿದ್ದು’ ಎಂದು ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.