ಸಾಂದರ್ಭಿಕ ಚಿತ್ರ
ನವದೆಹಲಿ: ಅಕ್ರಮ ಮರಳುದಂಧೆಯನ್ನು ಬಯಲಿಗೆಳೆಯಲು ತೆರಳಿದ್ದ ಮಧ್ಯಪ್ರದೇಶ ಮೂಲದ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ವ್ಯಕ್ತಿಯನ್ನು ಬಂಧಿಸದಂತೆ ಆದೇಶಿಸಿದೆ. ಜತೆಗೆ ಹೈಕೋರ್ಟ್‌ನಲ್ಲಿ ದೂರು ನೀಡುವ ಅವಕಾಶ ಕಲ್ಪಿಸಿದೆ.
ಶಕ್ತಿಕಾಂತ್ ಜತಾವ್ ಮತ್ತು ಅಮರಕಂಠ ಸಿಂಗ್ ಚವ್ಹಾಣ್ ಅವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪ್ರಕರಣ ಕುರಿತು ಮಧ್ಯಪ್ರದೇಶ ಮತ್ತು ದೆಹಲಿ ಸರ್ಕಾರ ಪ್ರತಿಕ್ರಿಯಿಸುವಂತೆ ನೋಟಿಸ್ ಜಾರಿ ಮಾಡಿತು.
'ನಾವು ಈ ಅರ್ಜಿಯನ್ನು ಪುರಸ್ಕರಿಸುತ್ತಿಲ್ಲ. ಆದರೆ, ಈ ಗಂಭೀರ ಆರೋಪವನ್ನು ಪರಿಗಣಿಸಿ ಎರಡು ವಾರದೊಳಗೆ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗುವುದು. ಅಲ್ಲಿಯವರೆಗೂ ಅರ್ಜಿದಾರರನ್ನು ಬಂಧಿಸಬಾರದು’ ಎಂದು ಪೀಠ ಹೇಳಿತು.
‘ತಮ್ಮನ್ನು ಅಪಹರಿಸಲಾಗಿತ್ತು. ಬಂಧನದ ಅವಧಿಯಲ್ಲಿ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯು ಜಾತಿ ನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಲಾಗಿತ್ತು.
‘ಪ್ರಕರಣದ ಗಂಭೀರತೆ ಪರಿಗಣಿಸಿ ಭಿಂಡ್‌ನ ಪೊಲೀಸ್ ವರಿಷ್ಠಾಧಿಕಾರಿಯನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಏಕೆ ಮಾಡಬಾರದು’ ಎಂದು ಪೀಠ ಪ್ರಶ್ನಿಸಿದೆ. ಇವರೊಂದಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ದೆಹಲಿಯ ಎನ್‌ಸಿಟಿಯನ್ನೂ ಪಕ್ಷಗಾರರನ್ನಾಗಿ ಏಕೆ ಮಾಡಬಾರದು’ ಎಂದೂ ಕೇಳಿತ್ತು.
‘ಭಿಂಡ್‌ನ ಪೊಲೀಸ ವರಿಷ್ಠಾಧಿಕಾರಿಯಿಂದ ತನಗೆ ಜೀವ ಬೆದರಿಕೆ ಇದೆ. ತಮ್ಮ ಕಚೇರಿಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ನನಗೆ ಎರಡು ತಿಂಗಳ ಅವಧಿಗೆ ರಕ್ಷಣೆ ಕೊಡಬೇಕು’ ಎಂದು ಕೋರಿ ಅಮರಕಂಠ ಸಿಂಗ್ ಚವ್ಹಾಣ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಭದ್ರತೆ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.