ADVERTISEMENT

ನೀವು ನಿಜವಾದ ಭಾರತೀಯರಾಗಿದ್ದರೆ, ಅಂತಹ ಹೇಳಿಕೆ ನೀಡುತ್ತಿರಲಿಲ್ಲ: ರಾಹುಲ್‌ಗೆ SC

ಸೇನೆಯ ವಿರುದ್ಧ ಹೇಳಿಕೆ; ಲಖನೌ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ

ಪಿಟಿಐ
Published 4 ಆಗಸ್ಟ್ 2025, 9:50 IST
Last Updated 4 ಆಗಸ್ಟ್ 2025, 9:50 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ‘ಭಾರತ್‌ ಜೋಡೊ ಯಾತ್ರೆ’ಯ ಸಂದರ್ಭದಲ್ಲಿ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ‘ನೀವು ನೈಜ ಭಾರತೀಯರಾಗಿದ್ದರೆ, ಅಂತಹ ಮಾತು ಆಡುತ್ತಿರಲಿಲ್ಲ’ ಎಂದಿದೆ.

ADVERTISEMENT

ಆದರೂ, ರಾಹುಲ್‌ ವಿರುದ್ಧ ಲಖನೌ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತ ಮತ್ತು ಆಗಸ್ಟಿನ್‌ ಜಾರ್ಜ್ ಮಸೀಹ್ ಅವರ ಪೀಠವು ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್ ಜಾರಿ ಮಾಡಿತು.

‘ನೀವು ವಿರೋಧ ಪಕ್ಷದ ನಾಯಕ. ಈ ವಿಷಯವನ್ನು ಸಂಸತ್ತಿನಲ್ಲಿ ಏಕೆ ಮಾತನಾಡಬಾರದು, ನೀವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಹೇಳಬೇಕು’ ಎಂದು ಪೀಠ ಪ್ರಶ್ನಿಸಿತು. 

ರಾಹುಲ್‌ ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ‘ವಿರೋಧ ಪಕ್ಷದ ನಾಯಕ ಇಂತಹ ವಿಷಯಗಳ ಬಗ್ಗೆ ಮಾತನಾಡಬಾರದು ಎಂದಾದರೆ, ಅದು ದುರದೃಷ್ಟಕರ ಸಂಗತಿ’ ಎಂದು ವಾದಿಸಿದರು. ‘ಮಾಧ್ಯಮಗಳಲ್ಲಿ ಪ್ರಕಟವಾದ ಈ ವಿಷಯಗಳನ್ನು ಹೇಳಬಾರದು ಎಂದಾದರೆ, ಅವರು ವಿರೋಧ ಪಕ್ಷದ ನಾಯಕರಾಗಿರಲು ಸಾಧ್ಯವಿಲ್ಲ’ ಎಂದರು. 

ಪೀಠದ ‘ನೈಜ ಭಾರತೀಯ’ ಟೀಕೆಗೆ ಪ್ರತಿಕ್ರಿಯಿಸಿದ ಸಿಂಘ್ವಿ, ‘ಭಾರತದ 20 ಸೈನಿಕರನ್ನು ಥಳಿಸಿ ಕೊಲ್ಲಲಾಯಿತು ಎಂದು ನಿಜವಾದ ಭಾರತೀಯರು ಹೇಳುವ ಸಾಧ್ಯತೆಯಿದೆ. ಇದು ಕೂಡ ಕಳವಳಕಾರಿ ವಿಷಯ’ ಎಂದರು.

ಅದಕ್ಕೆ ಪೀಠ, ‘ಗಡಿಯಲ್ಲಿ ಸಂಘರ್ಷ ನಡೆದಾಗ ಎರಡೂ ಕಡೆಗಳಲ್ಲಿ ಸಾವು –ನೋವು ಸಂಭವಿಸುವುದು ಅಸಾಮಾನ್ಯ ಸಂಗತಿಯೇ?’ ಎಂದಿತು. 

ವಿರೋಧ ಪಕ್ಷದ ಜವಾಬ್ದಾರಿಯುತ ನಾಯಕನಾಗಿ ಅಂತಹ ವಿಷಯಗಳನ್ನು ಎತ್ತಲು ಸೂಕ್ತ ವೇದಿಕೆ ಇರುವುದರಿಂದ ರಾಹುಲ್‌ ಅವರು ಆ ರೀತಿ ಮಾಡಬಾರದಿತ್ತು ಎಂದು ನ್ಯಾಯಮೂರ್ತಿ ದತ್ತ ಹೇಳಿದರು. ರಾಹುಲ್‌ ಅವರು ಸೂಕ್ತ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಬಹುದಿತ್ತು ಎಂಬುದನ್ನು ಒಪ್ಪಿಕೊಂಡ ಸಿಂಘ್ವಿ, ‘ಈ ದೂರು ಅರ್ಜಿದಾರರಿಗೆ ಕಿರುಕುಳ ನೀಡುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ’ ಎಂದು ವಾದಿಸಿದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223 ಅನ್ನು ಉಲ್ಲೇಖಿಸಿದ ಸಿಂಘ್ವಿ, ಕ್ರಿಮಿನಲ್ ದೂರನ್ನು ಪರಿಗಣಿಸುವ ಮೊದಲು ನ್ಯಾಯಾಲಯವು ಆರೋಪಿಗಳ ವಾದ ಆಲಿಸುವುದು ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಅದನ್ನು ಮಾಡಿಲ್ಲ ಎಂದರು.

ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿ ಮೂರು ವಾರಗಳ ಒಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿದ ಪೀಠ, ಲಖನೌ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗೆ ತಡೆ ನೀಡಿತು.

‘ಭಾರತ್‌ ಜೋಡೊ ಯಾತ್ರೆ’ಯ ಸಂದರ್ಭದಲ್ಲಿ 2022ರ ಡಿಸೆಂಬರ್‌ನಲ್ಲಿ ರಾಹುಲ್‌ ಅವರು ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉದಯ್ ಶಂಕರ್ ಶ್ರೀವಾಸ್ತವ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಲಖನೌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಪ್ರಶ್ನಿಸಿ ರಾಹುಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ ಮೇ 29ರಂದು ತಿರಸ್ಕರಿಸಿತ್ತು. 

ಪೀಠ ಹೇಳಿದ್ದು...

* ಭಾರತದ 2000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ನಿಮಗೆ ಹೇಗೆ ತಿಳಿಯಿತು? ಆಗ ನೀವು ಆ ಸ್ಥಳದಲ್ಲಿ ಇದ್ದೀರಾ? ನಿಮ್ಮ ಬಳಿ ಯಾವುದಾದರೂ ನಂಬಲರ್ಹ ಸಾಕ್ಷ್ಯ ಇದೆಯೇ? 

* ಯಾವುದೇ ಸಾಕ್ಷ್ಯ ಇಲ್ಲದಿದ್ದರೆ ನೀವು ಈ ಹೇಳಿಕೆಗಳನ್ನು ಏಕೆ ನೀಡುತ್ತೀರಿ? ನೀವು ನೈಜ ಭಾರತೀಯರಾಗಿದ್ದರೆ ಅಂತಹ ಮಾತು ಆಡುತ್ತಿರಲಿಲ್ಲ

ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ‘ಚೀನಾ ಗುರು’ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಿದೆ..
–ಅಮಿತ್‌ ಮಾಳವೀಯ ಬಿಜೆಪಿ ಐ.ಟಿ ವಿಭಾಗದ ಮುಖ್ಯಸ್ಥ
2020ರ ಗಾಲ್ವನ್ ಘಟನೆಯ ನಂತರ ಚೀನಾ ಜತೆಗಿನ ಸಂಘರ್ಷದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಉತ್ತರ ಬಯಸುತ್ತಿದ್ದಾನೆ. ಆದರೆ ಮೋದಿ ಸರ್ಕಾರ ಸತ್ಯ ಮರೆಮಾಚಿದೆ.
–ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಮುಖಂಡ
ಈ ಹಿಂದೆ ಹಲವು ನ್ಯಾಯಾಲಯಗಳು ಛೀಮಾರಿ ಹಾಕಿದ್ದರೂ ರಾಹುಲ್‌ ಅವರು ಅಪಕ್ವ ಬೇಜವಾಬ್ದಾರಿ ಮತ್ತು ದೇಶ ವಿರೋಧಿ ಹೇಳಿಕೆ ನೀಡುತ್ತಲೇ ಇದ್ದಾರೆ.
–ಗೌರವ್‌ ಭಾಟಿಯಾ, ಬಿಜೆಪಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.