ADVERTISEMENT

ಎಐಎಂಐಎಂ ನೋಂದಣಿ ರದ್ದು: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಜಾತಿ ನೆಚ್ಚಿಕೊಂಡ ಪಕ್ಷಗಳು ದೇಶಕ್ಕೆ ಅಪಾಯಕಾರಿ

ಪಿಟಿಐ
Published 15 ಜುಲೈ 2025, 16:13 IST
Last Updated 15 ಜುಲೈ 2025, 16:13 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅಖಿಲ ಭಾರತ ಮಜ್ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ನೋಂದಣಿಯನ್ನು ರದ್ದುಪಡಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಇದೇ ವೇಳೆ ಅದು, ‘ಜಾತಿಯನ್ನು ನೆಚ್ಚಿಕೊಂಡಿರುವ ರಾಜಕೀಯ ಪಕ್ಷಗಳು ದೇಶಕ್ಕೆ ಅಷ್ಟೇ ಅಪಾಯಕಾರಿ’ ಎಂದೂ ಹೇಳಿದೆ.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌, ಜಾಯಮಾಲ್ಯಾ ಬಾಗಚಿ ಅವರ ಪೀಠವು, ‘ಎಐಎಂಐಎಂ ಪಕ್ಷದ ಸಂವಿಧಾನದ ಪ್ರಕಾರ, ಅದು ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಹಿಂದುಳಿದವರ ಏಳಿಗೆಗೆ ಶ್ರಮಿಸುವ ಉದ್ದೇಶವನ್ನು ಹೊಂದಿದೆ. ಈ ಅಂಶಗಳನ್ನು ಭಾರತೀಯ ಸಂವಿಧಾನವು ಪ್ರತಿಪಾದಿಸುತ್ತದೆ’ ಎಂದು ತಿಳಿಸಿದೆ.

ADVERTISEMENT

ಎಐಎಂಐಎಂ ನೋಂದಣಿ ಮತ್ತು ಮಾನ್ಯತೆಯನ್ನು ರದ್ದುಪಡಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ನ ತೀರ್ಪುನ್ನು ಪ್ರಶ್ನಿಸಿ ತಿರುಪತಿ ನರಸಿಂಹ ಮುರಾರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಕೀಲ ವಿಷ್ಣು ಶಂಕರ್‌ ಜೈನ್‌ ವಾದ ಮಂಡಿಸಿದರು.

‘ತಟಸ್ಥ ಅರ್ಜಿ ಸಲ್ಲಿಸಿ’:

ಮೇಲ್ಮನವಿ ಅರ್ಜಿಯನ್ನು ಹಿಂಪಡೆಯುವಂತೆ ವಕೀಲರಿಗೆ ಸೂಚಿಸಿದ ಪೀಠ, ‘ಅಗತ್ಯವೆನಿಸಿದರೆ ಅರ್ಜಿದಾರರು ಎಲ್ಲ ರಾಜಕೀಯ ಪಕ್ಷಗಳಲ್ಲಿನ ವಿವಿಧ ವಿಷಯಗಳ ಸುಧಾರಣೆಗಳಿಗೆ ಸಂಬಂಧಿಸಿದಂತೆ ವಿಶಾಲ ದೃಷ್ಟಿಕೋನದಿಂದ ತಟಸ್ಥ ಅರ್ಜಿ ಸಲ್ಲಿಸಿದರೆ ಪರಿಶೀಲಿಸುವುದಾಗಿ’ ಹೇಳಿತು.

‘ಜಾತಿಯನ್ನೇ ನೆಚ್ಚಿಕೊಂಡಿರುವಂತಹ ಕೆಲ ರಾಜಕೀಯ ಪಕ್ಷಗಳೂ ಇವೆ. ಅವು ದೇಶಕ್ಕೆ ಅಷ್ಟೇ ಅಪಾಯಕಾರಿ. ಅದನ್ನು ಅನುಮತಿಸುವುದಿಲ್ಲ’ ಎಂದು ಪೀಠ ಇದೇ ವೇಳೆ ತಿಳಿಸಿತು.

ಇಸ್ಲಾಮಿಕ್‌ ಶಿಕ್ಷಣ ಕಲಿಸುವುದು ತಪ್ಪಲ್ಲ’:

‘ಎಐಎಂಐಎಂ ಪಕ್ಷವು ಇಸ್ಲಾಮಿಕ್‌ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಷರಿಯಾ ಕಾನೂನು ಪಾಲಿಸಲು ಸಾಮಾನ್ಯ ಜಾಗೃತಿ ಮೂಡಿಸುವುದಾಗಿ ಹೇಳಿದೆ’ ಎಂದು ವಕೀಲ ಜೈನ್‌ ಈ ವೇಳೆ ಪೀಠದ ಗಮನಕ್ಕೆ ತಂದರು.  ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್‌, ‘ಅದರಲ್ಲೇನು ತಪ್ಪಿದೆ? ಇಸ್ಲಾಮಿಕ್‌ ಶಿಕ್ಷಣ ಕಲಿಸುವುದು ತಪ್ಪಲ್ಲ. ದೇಶದಲ್ಲಿನ ಹೆಚ್ಚು ರಾಜಕೀಯ ಪಕ್ಷಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರೆ ಸ್ವಾಗತಿಸುತ್ತೇವೆ’ ಎಂದರು.

ವಾದ ಮುಂದುವರಿಸಿದ ವಕೀಲರು, ‘ಹಿಂದೂ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ನೋಂದಾಯಿಸಲು ಮತ್ತು ಅದರಡಿ ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳನ್ನು ಕಲಿಸಲು ಬಯಸುವುದಾಗಿ ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ವಿಷಯದಲ್ಲಿ ಆಯೋಗ ತಾರತಮ್ಯ ಮಾಡುತ್ತಿದೆ’ ಎಂದು ಪೀಠದ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಹಾಗಾದರೆ, ಈ ವಿಷಯವನ್ನು ನೀವು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಿ. ಕಾನೂನು ಅದನ್ನು ನೋಡಿಕೊಳ್ಳುತ್ತದೆ. ನಮ್ಮ ಹಳೆಯ ಗ್ರಂಥ, ಪುಸ್ತಕ, ಸಾಹಿತ್ಯ ಅಥವಾ ಇತಿಹಾಸವನ್ನು ಓದುವುದರಲ್ಲಿ ಯಾವುದೇ ತಪ್ಪಿಲ್ಲ. ಕಾನೂನಿನ ಅಡಿಯಲ್ಲಿ ಅದಕ್ಕೆ ಯಾವುದೇ ನಿಷೇಧವಿಲ್ಲ’ ಎಂದು ಹೇಳಿತು.  

‘ಯಾವುದೇ ರಾಜಕೀಯ ಪಕ್ಷವು ಅಸ್ಪೃಶ್ಯತೆಯನ್ನು ಉತ್ತೇಜಿಸುವುದಾಗಿ ಹೇಳಿದರೆ ಅದು ಅಪರಾಧವಾಗುತ್ತದೆ. ಅಂಥ ಪಕ್ಷದ ನೋಂದಣಿಯನ್ನು ರದ್ದುಗೊಳಿಸಬೇಕಾಗುತ್ತದೆ ಮತ್ತು ನಿಷೇಧಿಸಬೇಕಾಗುತ್ತದೆ’ ಎಂದು ಪೀಠ ತಿಳಿಸಿತು. ‘ಆದರೆ, ಸಂವಿಧಾನವು ಧಾರ್ಮಿಕ ಕಾನೂನನ್ನು ರಕ್ಷಿಸುತ್ತದೆ. ಹೀಗಿರುವಾಗ ರಾಜಕೀಯ ಪಕ್ಷವು ಜನರಿಗೆ ಧಾರ್ಮಿಕ ಶಿಕ್ಷಣ ನೀಡಲು ಬಯಸಿದರೆ, ಅದರಲ್ಲಿ ಯಾವುದೇ  ತಪ್ಪಿಲ್ಲ’ ಎಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.