ADVERTISEMENT

ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗೂ ಕಾಲಮಿತಿ ನಿಗದಿಪಡಿಸಿದ ‘ಸುಪ್ರೀಂ’

ಪಿಟಿಐ
Published 12 ಏಪ್ರಿಲ್ 2025, 9:40 IST
Last Updated 12 ಏಪ್ರಿಲ್ 2025, 9:40 IST
<div class="paragraphs"><p>ಸುಪ್ರೀಂ ಕೋರ್ಟ್‌&nbsp;</p></div>

ಸುಪ್ರೀಂ ಕೋರ್ಟ್‌ 

   

ನವದೆಹಲಿ: ಪರಿಶೀಲನೆಗಾಗಿ ರಾಜ್ಯ‍ಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿ ಮಾಡಿದೆ.

ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು.

ADVERTISEMENT

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ತಡೆಹಿಡಿದಿದ್ದ 10 ಮಸೂದೆಗಳಿಗೆ ಅಂಕಿತ ದೊರೆತಿದೆ ಎಂದು ಭಾವಿಸಬೇಕು ಎನ್ನುವ ತೀರ್ಪು ನೀಡಿದ ನಾಲ್ಕು ದಿನಗಳ ನಂತರ ಸುಪ್ರೀಂ ಕೋರ್ಟ್‌ ಆ ತೀರ್ಪಿನ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಶುಕ್ರವಾರ ಪ್ರಕಟಿಸಿದೆ.

‘ಕೇಂದ್ರ ಗೃಹ ಸಚಿವಾಲಯವು ಸೂಚಿಸಿದ ಕಾಲಮಿತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ನಾವು ಭಾವಿಸಿದ್ದೇವೆ. ರಾಜ್ಯಪಾಲರು ಪರಿಶೀಲನೆಗೆ ರವಾನಿಸಿದ ಮಸೂದೆಯ ಬಗ್ಗೆ ರಾಷ್ಟ್ರಪತಿಯವರು ಮೂರು ತಿಂಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

‘ವಿಳಂಬ ಆದಲ್ಲಿ ಅದಕ್ಕೆ ಸೂಕ್ತ ಕಾರಣವನ್ನು ದಾಖಲಿಸಬೇಕು, ಸಂಬಂಧಿಸಿದ ರಾಜ್ಯಕ್ಕೆ ಅದನ್ನು ತಿಳಿಸಬೇಕು. ರಾಜ್ಯಗಳು ಕೂಡ ಜೊತೆಯಾಗಿ ಕೆಲಸ ಮಾಡಬೇಕು, ತಮ್ಮ ಮುಂದೆ ಇರಿಸಬಹುದಾದ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು, ಕೇಂದ್ರ ಸರ್ಕಾರ ನೀಡುವ ಸಲಹೆಗಳನ್ನು ತ್ವರಿತವಾಗಿ ಪರಿಗಣಿಸಬೇಕು’ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ನ್ಯಾಯಪೀಠವು ಈ ತೀರ್ಪನ್ನು ಏಪ್ರಿಲ್‌ 8ರಂದು ನೀಡಿದೆ.

‘ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಮಸೂದೆಯೊಂದನ್ನು ಇರಿಸಿಕೊಂಡಾಗ, ರಾಷ್ಟ್ರಪತಿಯವರು ಆ ಮಸೂದೆಗೆ ಅಂಕಿತ ತಡೆಹಿಡಿದಾಗ, ಅಂತಹ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಮುಕ್ತ ಅವಕಾಶ ರಾಜ್ಯ ಸರ್ಕಾರಗಳಿಗೆ ಇರುತ್ತದೆ’ ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.