ನವದೆಹಲಿ/ಠಾಣೆ: ‘ಆ ವಕೀಲನು ನನ್ನ ಮೇಲೆ ಶೂ ಎಸೆಯಲು ಯತ್ನಿಸಿದ್ದು ನನಗೆ ಮತ್ತು ನನ್ನ ಸಹೋದರ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿಗೆ ಆಘಾತ ತಂದಿತು. ಆದರೆ, ಈಗ ಅದೊಂದು ಮುಗಿದುಹೋದ ಅಧ್ಯಾಯ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅಭಿಪ್ರಾಯಪಟ್ಟರು.
ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಶೂ ಎಸೆಯಲು ಯತ್ನಿಸಿದ ಘಟನೆ ಕುರಿತು ವಕೀಲರು ಮತ್ತು ಸಿಜೆಐ ನಡುವೆ ಪುಟ್ಟ ಸಂಭಾಷಣೆಗೆ ನ್ಯಾಯಾಲಯದ ಸಭಾಂಗಣವು ಗುರುವಾರ ಸಾಕ್ಷಿಯಾಯಿತು.
ಸಿಜೆಐ ಗವಾಯಿ ಅವರೊಂದಿಗೆ ಪೀಠದಲ್ಲಿದ್ದ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಮೊದಲಿಗೆ ಈ ವಿಚಾರವನ್ನು ಪ್ರಸ್ತಾಪಿಸಿದರು. ‘ವಕೀಲನ ಕುರಿತಾಗಿ ತೆಗೆದುಕೊಂಡ ನಿರ್ಧಾರ ಸೂಕ್ತವಾಗಲಿಲ್ಲ. ನನಗೆ ಈ ಬಗ್ಗೆ ಆಕ್ಷೇಪಗಳಿವೆ’ ಎಂದರು.
‘ಇದು ಖಂಡಿತ ತಮಾಷೆಯ ವಿಚಾರವಾಗಿರಲಿಲ್ಲ. ಸುಪ್ರೀಂ ಕೋರ್ಟ್‌ಗೆ ಅವಮಾನ ಮಾಡುವಂತ ಕೆಲಸ ಇದು. ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕಿತ್ತು’ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ದನಿ ಗೂಡಿಸಿ, ‘ಇದು ಕ್ಷಮಿಸಲಾಗದ ವರ್ತನೆ. ಆದರೆ, ಘಟನೆ ನಡೆದಾಗ ಸಿಜೆಐ ಅವರು ನಡೆದುಕೊಂಡಿದ್ದು ಮಾತ್ರ ಅವರ ಘನತೆಗೆ ತಕ್ಕುದಾಗಿತ್ತು’ ಎಂದರು.
‘ಇಂಥ ಆಘಾತಕಾರಿ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ. ವಿಚಾರಣೆಯನ್ನು ಮುಂದುವರಿಸೋಣ’ ಎಂದು ನ್ಯಾಯಾಲಯದ ಸಭಾಂಗಣದಲ್ಲಿಯೇ ಇದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ಹೇಳಿದರು.
ಈ ಬಳಿಕ ಸಿಜೆಐ ಗವಾಯಿ ಅವರು ಮತ್ತೊಮ್ಮೆ ಮಾತಿಗಿಳಿದು, ‘ನಮಗೆ ಇದೊಂದು ಮರೆತುಹೋದ ಅಧ್ಯಾಯ’ ಎನ್ನುತ್ತಾ ವಿಚಾರಣೆಯನ್ನು ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.