ನವದೆಹಲಿ: ದಂಪತಿ ನಡುವಿನ ಕಲಹ ಪ್ರಕರಣವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಮಗುವಿನ ಪ್ರಯಾಣವನ್ನು ನಿರ್ಬಂಧಿಸುವ ದುಬೈ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಟೀಕಿಸಿದ್ದು, ಅದನ್ನು ‘ಅತಿ ಕ್ರೂರ’ ಮತ್ತು ‘ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಹೇಳಿದೆ.
ಘಾನಾ ಪ್ರಜೆಯಾಗಿರುವ ಮತ್ತು ಯುಎಇಯ ದುಬೈನಲ್ಲಿ ವಾಸಿಸುವ ಮಗುವಿನ ತಂದೆಯು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.
ದಾಂಪತ್ಯ ಕಲಹ ಪ್ರಕರಣದಲ್ಲಿ ನ್ಯಾಯಾಲಯವು ಪ್ರಯಾಣ ನಿಷೇಧವನ್ನು ವಿಧಿಸುವುದು ವಾಸ್ತವಿಕವಾಗಿ ‘ಗೃಹಬಂಧನ’ಕ್ಕೆ ಸಮಾನವಾಗಿರುತ್ತದೆ ಎಂದು ಪೀಠವು ಹೇಳಿತು.
ಬೆಂಗಳೂರಿನ ನಿವಾಸಿಯಾಗಿರುವ ತನ್ನ ಪರಿತ್ಯಕ್ತ ಪತ್ನಿ ದುಬೈ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಮ್ಮ ಮಗನನ್ನು ದುಬೈನಿಂದ ಭಾರತಕ್ಕೆ ಕರೆದುಕೊಂಡು ಹೋಗಿದ್ದಾರೆ ತಂದೆ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ವಾಸ್ತವಾಂಶಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ‘ದಾಂಪತ್ಯ ಕಲಹ ಪ್ರಕರಣದಲ್ಲಿ ನ್ಯಾಯಾಲಯವು ಮಗುವಿನ ಮೇಲೆ ಪ್ರಯಾಣ ನಿಷೇಧವನ್ನು ಹೊರಡಿಸಿದ್ದು ಹೇಗೆ’ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ನಿಖಿಲ್ ಗೋಯೆಲ್ ಅವರನ್ನು ಪ್ರಶ್ನಿಸಿದರು.
‘ಮಾನವ ಹಕ್ಕುಗಳಲ್ಲಿ ನಂಬಿಕೆ ಇಡುವ ಯಾವುದೇ ನ್ಯಾಯಾಲಯವು ಇಂತಹ ಆದೇಶ ಹೊರಡಿಸಲು ಸಾಧ್ಯವಿಲ್ಲ. ಏಕೆಂದರೆ, ಅದು ತಪ‍್ಪಿತಸ್ಥರೆಂದು ಸಾಬೀತಾಗದವರನ್ನು ಗೃಹಬಂಧನದಲ್ಲಿ ಇರಿಸುವುದಕ್ಕೆ ಸಮನಾಗುತ್ತದೆ’ ಎಂದು ಪೀಠ ಹೇಳಿದೆ.
ಈ ವಿವಾದವನ್ನು ಬಗೆಹರಿಸಲು ಸ್ಥಳೀಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುವಂತೆ ಕರ್ನಾಟಕ ಹೈಕೋರ್ಟ್ ತಿಳಿಸಿರುವುದು ಸರಿಯಾಗಿಯೇ ಇದೆ ಎಂದು ಪೀಠ ಹೇಳಿತು. ಕಳೆದ ವರ್ಷ ಡಿ.10ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪತಿ ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.