ADVERTISEMENT

ವಿಚಾರಣಾಧೀನ ಬಡ ಕೈದಿಗಳ ಜಾಮೀನು ಮೊತ್ತ: ಎಸ್‌ಒಪಿ ಮಾರ್ಪಡಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 19 ಅಕ್ಟೋಬರ್ 2025, 15:27 IST
Last Updated 19 ಅಕ್ಟೋಬರ್ 2025, 15:27 IST
   

ನವದೆಹಲಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‌ಎಸ್‌ಎ) ಮೂಲಕ ರಾಜ್ಯ ಸರ್ಕಾರಗಳು ವಿಚಾರಣಾಧೀನ ಬಡ ಕೈದಿಗಳ ಜಾಮೀನು ಮೊತ್ತ ಪಾವತಿಸುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಸುಪ್ರೀಂ ಕೋರ್ಟ್‌ ಮಾರ್ಪಡಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್‌ ಐಶ್ವರ್ಯಾ ಭಾಟಿ ಮತ್ತು ಅಮಿಕಸ್ ಕ್ಯೂರಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರ ಸಲಹೆಯನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಮತ್ತು ಸತೀಶ್‌ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ ಕಳೆದ ವರ್ಷದ ಫೆ.13ರಂದು ಹೊರಡಿಸಿದ್ದ ತನ್ನ ಹಿಂದಿನ ಎಸ್‌ಒಪಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿತು.

ADVERTISEMENT

ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಡಿಎಲ್‌ಎಸ್‌ಎ ಕಾರ್ಯದರ್ಶಿ, ಪೊಲೀಸ್ ವರಿಷ್ಠಾಧಿಕಾರಿ, ಸಂಬಂಧಪಟ್ಟ ಜೈಲಿನ ಅಧೀಕ್ಷಕರು/ಉಪಾಧೀಕ್ಷಕರು ಮತ್ತು ಸಂಬಂಧಪಟ್ಟ ಜೈಲಿನ ಉಸ್ತುವಾರಿ ನ್ಯಾಯಧೀಶರನ್ನು ಒಳಗೊಂಡ ಅಧಿಕಾರ ಸಮಿತಿಯನ್ನು ರಚಿಸಲಾಗುವುದು ಎಂದು ಆದೇಶಿಸಿತು.

ಡಿಎಲ್‌ಎಸ್‌ಎ ಕಾರ್ಯದರ್ಶಿ ಅಧಿಕಾರ ಸಮಿತಿಯ ಸಭೆಗಳ ಸಂಚಾಲಕರಾಗಿರುತ್ತಾರೆ ಎಂದಿದೆ.

ಜಾಮೀನು ಮಂಜೂರು ಆದೇಶ ಹೊರಡಿಸಿದ ಏಳು ದಿನಗಳ ಒಳಗೆ ವಿಚಾರಣಾಧೀನ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡದಿದ್ದರೆ, ಜೈಲು ಪ್ರಾಧಿಕಾರದ ಕಾರ್ಯದರ್ಶಿ ಡಿಎಲ್‌ಎಸ್‌ಎಗೆ ತಿಳಿಸಬೇಕು ಎಂದು ನ್ಯಾಯಪೀಠವು ಹೇಳಿದೆ.

ಮಾಹಿತಿ ಪಡೆದ ಡಿಎಲ್‌ಎಸ್‌ಎ ಕಾರ್ಯದರ್ಶಿಯು, ವಿಚಾರಣಾಧೀನ ಬಡ ಕೈದಿಯು ತನ್ನ ಉಳಿತಾಯ ಖಾತೆಯಲ್ಲಿ ಹಣ ಹೊಂದಿದ್ದಾರೆಯೇ ಎಂದು ಪರಿಶೀಲಿಸಲಿದ್ದಾರೆ. ಹಣ ಇಲ್ಲದಿದ್ದರೆ ಐದು ದಿನಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದಿದೆ.

ಜಿಲ್ಲಾ ಮಟ್ಟದ ಅಧಿಕಾರ ಸಮಿತಿಯು (ಡಿಎಲ್‌ಇಸಿ) ವರದಿ ಸ್ವೀಕರಿಸಿದ ದಿನದಿಂದ ಐದು ದಿನದ ಅವಧಿಯಲ್ಲಿ ಡಿಎಲ್‌ಎಸ್‌ಎ ಶಿಫಾರಸಿನ ಮೇರೆಗೆ ಜಾಮೀನಿಗಾಗಿ ನಿಗದಿ ಪಡಿಸಿದ ಹಣವನ್ನು ಬಿಡುಗಡೆ ಮಾಡಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಡಿಎಲ್‌ಎಸ್‌ಎ ಶಿಫಾರಸು ಮಾಡಿದ ಪ್ರಕರಣಗಳನ್ನು ಪರಿಗಣಿಸಲು ಡಿಎಲ್‌ಇಸಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಸೋಮವಾರ ಸಭೆ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.