ADVERTISEMENT

ಪ್ರಾಧ್ಯಾಪಕ ಅಲಿ ಖಾನ್ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 15:20 IST
Last Updated 25 ಆಗಸ್ಟ್ 2025, 15:20 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್‌ ಮಹಮೂದಾಬಾದ್‌ ವಿರುದ್ಧ ಹರಿಯಾಣ ಎಸ್‌ಐಟಿ ಸಲ್ಲಿಸಿರುವ ಆರೋಪಪಟ್ಟಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಕ್ಕೆ ಸುಪ್ರಿಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಈ ಪ್ರಕರಣದಲ್ಲಿ ಯಾವುದೇ ದೋಷಾರೋಪ ನಿಗದಿ ಮಾಡದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಆಪರೇಷನ್‌ ಸಿಂಧೂರ ಕುರಿತು ಅಲಿ ಖಾನ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗಳಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ADVERTISEMENT

ಅಲಿ ಖಾನ್ ಅವರ ವಿವಾದಾತ್ಮಕ ಪೋಸ್ಟ್‌ಗಳ ಕುರಿತು ದಾಖಲಾದ ಎರಡು ಎಫ್‌ಐಆರ್‌ಗಳ ತನಿಖೆಗೆ ಸುಪ್ರೀಂ ಕೋರ್ಟ್ ಎಸ್‌ಐಟಿ ರಚಿಸಿತ್ತು. ‘ಒಂದು ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪರಿಸಮಾಪ್ತಿ ವರದಿಯನ್ನು ಸಲ್ಲಿಸಲಾಗಿದ್ದು, ಇನ್ನೊಂದರ ಕುರಿತು ಆಗಸ್ಟ್ 22 ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ’ ಎಂದು ಎಸ್‌ಐಟಿ ಪೀಠಕ್ಕೆ ತಿಳಿಸಿತು.

ಹರಿಯಾಣ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಈ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿದರು. 

‘ಅಪರಾಧ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಹಲವು ಅಂಶಗಳು ತನಿಖೆಯ ವೇಳೆ ಕಂಡುಬಂದಿದೆ. ಆದ್ದರಿಂದ ಮತ್ತೊಂದು ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಅಲಿ ಖಾನ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಚಾರ್ಜ್‌ಶೀಟ್ ಸಲ್ಲಿಸಿರುವುದು ‘ಅತ್ಯಂತ ದುರದೃಷ್ಟಕರ’ ಎಂದು ಪೀಠಕ್ಕೆ ತಿಳಿಸಿದರು. 

ಅರೋಪಪಟ್ಟಿಯನ್ನು ಪರಿಶೀಲಿಸಲು ಮತ್ತು ಅಲಿ ಖಾನ್‌ ವಿರುದ್ಧ ಅದರಲ್ಲಿ ಮಾಡಲಾಗಿರುವ ಆರೋಪಗಳ ಪಟ್ಟಿ ಸಿದ್ಧಪಡಿಸುವಂತೆ ಸಿಬಲ್‌ ಅವರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.