
ನವದೆಹಲಿ: ಚುನಾವಣೆಗೆ ಮುನ್ನ ಉಚಿತ ಕೊಡುಗೆಗಳು (ಗ್ಯಾರಂಟಿಗಳು) ಹಾಗೂ ಸಬ್ಸಿಡಿಗಳನ್ನು ಘೋಷಿಸುವ ರಾಜ್ಯ ಸರ್ಕಾರಗಳ ಪ್ರವೃತ್ತಿಯನ್ನು ಗುರುವಾರ ಕಟುವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, ‘ಇಂತಹ ಯೋಜನೆಗಳ ವೆಚ್ಚಗಳ ಅಂತಿಮ ಹೊರೆ ತೆರಿಗೆದಾರರ ಮೇಲೆ ಬೀಳುತ್ತಿದೆ’ ಎಂದು ಅಭಿಪ್ರಾಯಪಟ್ಟಿದೆ.
‘ವಿದ್ಯುತ್ (ತಿದ್ದುಪಡಿ) ನಿಯಮಗಳು–2024’ರ ನಿಯಮ 23 ಅನ್ನು ಪ್ರಶ್ನಿಸಿ ತಮಿಳುನಾಡು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರ ಪೀಠವು, ‘ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿರುವ ಇಂತಹ ನೀತಿಗಳನ್ನು ಮರುಪರಿಶೀಲಿಸುವುದು ಅತ್ಯಗತ್ಯ’ ಎಂದು ಹೇಳಿದೆ.
ಗ್ರಾಹಕರ ಆರ್ಥಿಕ ಸ್ಥಿತಿ ಲೆಕ್ಕಿಸದೆಯೇ ಎಲ್ಲರಿಗೂ ಉಚಿತ ವಿದ್ಯುತ್ ನೀಡಲು ಮುಂದಾಗಿರುವ ತಮಿಳುನಾಡು ಸರ್ಕಾರದ ಪ್ರಸ್ತಾವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪೀಠ, ‘ನಾವು ನಿರ್ದಿಷ್ಟವಾಗಿ ತಮಿಳುನಾಡಿನ ಬಗ್ಗೆ ಮಾತನಾಡುತ್ತಿಲ್ಲ. ಇಡೀ ದೇಶದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಯಾವ ರೀತಿಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ’ ಎಂದು ಕೇಳಿತು.
‘ಉಚಿತ ಕೊಡುಗೆಗಳನ್ನು ವಿವೇಚನೆಯಿಲ್ಲದೆ ನೀಡುತ್ತಿರುವುದರಿಂದ ಭಾರತದ ಮೇಲೆ ಆರ್ಥಿಕ ಒತ್ತಡ ಉಂಟಾಗುತ್ತಿದೆ. ಹೆಚ್ಚುತ್ತಿರುವ ವಿತ್ತೀಯ ಕೊರತೆಯ ನಡುವೆಯೂ ರಾಜ್ಯಗಳು ದೊಡ್ಡ ಮಟ್ಟದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುತ್ತಿವೆ’ ಎಂದು ಸಿಜೆಐ ಹೇಳಿದರು.
ನೇರ ನಗದು ವರ್ಗಾವಣೆ ನೀತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ‘ಜನರು ಘನತೆ ಹಾಗೂ ಸ್ವಾಭಿಮಾನದಿಂದ ಬದುಕಲು ಸರ್ಕಾರಗಳು ಉದ್ಯೋಗದ ಮಾರ್ಗಗಳನ್ನು ಸೃಷ್ಟಿಸಬೇಕು. ನೀವು ಬೆಳಿಗ್ಗೆಯಿಂದಲೇ ಉಚಿತ ಆಹಾರ, ಅನಿಲ ಹಾಗೂ ವಿದ್ಯುತ್ ನೀಡುತ್ತೀರಿ. ಜತೆಗೆ, ನೇರವಾಗಿ ಖಾತೆಗೆ ನಗದು ವರ್ಗಾವಣೆ ಮಾಡುತ್ತೀರಿ. ಹಾಗಾದರೆ, ಜನರು ಏಕೆ ಕೆಲಸ ಮಾಡಬೇಕು. ಒಂದೇ ಕಡೆಯಿಂದಲೇ ಎಲ್ಲವೂ ಸಿಗುತ್ತದೆ ಎಂಬುದು ಗೊತ್ತಾದಾಗ ಅವರು ಏಕೆ ಕೆಲಸ ಕಲಿಯುತ್ತಾರೆ. ಇದು ನಾವು ಮಾಡುತ್ತಿರುವ ರಾಷ್ಟ್ರ ನಿರ್ಮಾಣವೇ’ ಎಂದು ಅವರು ಪ್ರಶ್ನಿಸಿದರು.
ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವಾಗದವರನ್ನು ಬೆಂಬಲಿಸುವ ಕರ್ತವ್ಯ ರಾಜ್ಯಕ್ಕಿದೆ ಎಂಬುದನ್ನು ಅವರು ಒಪ್ಪಿಕೊಂಡರು. ಆದಾಗ್ಯೂ, ‘ಫಲಾನುಭವಿಗಳನ್ನು ಸರಿಯಾಗಿ ಗುರುತಿಸಿ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು. ‘ಉಚಿತ ಯೋಜನೆಗಳ ಲಾಭವನ್ನು ಮೊದಲು ಪಡೆಯುವವರೇ ಅನುಕೂಲಸ್ಥರು. ಇಂತಹ ವಿಷಯಗಳ ಬಗ್ಗೆ ಗಮನ ಹರಿಸಬೇಕಲ್ಲವೇ’ ಎಂದು ಅವರು ಹೇಳಿದರು.
ಸರ್ಕಾರಗಳು ಕಲ್ಯಾಣ ಯೋಜನೆಗಳನ್ನು ವಿಸ್ತರಿಸುವ ಬದಲು ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.