ADVERTISEMENT

ಬೇಸಿಗೆ ರಜೆಯಲ್ಲಿ ಹಿರಿಯ ವಕೀಲರು ಕಿರಿಯರಿಗೆ ಅವಕಾಶ ನೀಡಬೇಕು: ಸುಪ್ರೀಂ ಕೋರ್ಟ್

ಪಿಟಿಐ
Published 28 ಮೇ 2025, 6:55 IST
Last Updated 28 ಮೇ 2025, 6:55 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಹಿರಿಯ ವಕೀಲರು ಬೇಸಿಗೆ ರಜೆಯಲ್ಲಿ ವಾದ ಮಂಡಿಸಬಾರದು ಎಂದು ಸು‍‍ಪ್ರೀಂ ಕೋರ್ಟ್ ಬುಧವಾರ ಸಲಹೆ ನೀಡಿದೆ.

ಈ ಅವಧಿಯಲ್ಲಿ ವಾದ ಮಂಡಿಸಲು ಕಿರಿಯ ವಕೀಲರಿಗೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯ ಪೀಠ ಹೇಳಿದೆ.

‘ಭಾಗಶಃ ಕೆಲಸದ ದಿನಗಳಲ್ಲಿ ಹಿರಿಯ ವಕೀಲರು ವಕಾಲತ್ತು ಮಾಡಬಾರದು’ ಎಂದು ನ್ಯಾಯಪೀಠವು ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ಅಭಿಷೇಕ್ ಮನು ಸಿಂಘ್ವಿ ಹಾಗೂ ನೀರಜ್ ಕಿಶನ್ ಕೌಲ್ ಅವರಿಗೆ ತಿಳಿಸಿದೆ.

ADVERTISEMENT

ಸುಪ್ರೀಂ ಕೋರ್ಟ್ ತನ್ನ ಸಾಂಪ್ರದಾಯಿಕ ಬೇಸಿಗೆ ರಜೆಗಳನ್ನು ‘ಭಾಗಶಃ ನ್ಯಾಯಾಲಯದ ಕೆಲಸದ ದಿನಗಳು’ ಎಂದು ಮರುನಾಮಕರಣ ಮಾಡಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ವಿರುದ್ಧ ಸಲ್ಲಿಸಲಾದ ಅರ್ಜಿಯ ಪರವಾಗಿ ವಾದ ಮಂಡಿಸಲು ಇವರು ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು.

ಹಿರಿಯ ವಕೀಲ ಶ್ಯಾಮ್ ದಿವಾನ್ ಲಭ್ಯವಿಲ್ಲದ ಕಾರಣ ವಿಚಾರಣೆ ಮುಂದೂಡಬೇಕು ಎಂದು ಪ್ರಕರಣದಲ್ಲಿರುವ ವಕೀಲರೊಬ್ಬರು ಕೋರಿದ್ದಾರೆ. ಈ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ಪ್ರತಿ ವರ್ಷ ಬೇಸಿಗೆ ಮತ್ತು ಚಳಿಗಾಲದ ರಜೆಗಳನ್ನು ತೆಗೆದುಕೊಳ್ಳುತ್ತಿತ್ತು. ಆದಾಗ್ಯೂ, ಈ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಮುಚ್ಚಲ್ಪಡುತ್ತಿರಲಿಲ್ಲ. ಬೇಸಿಗೆಯಲ್ಲಿ, ಪ್ರಮುಖ ಮತ್ತು ತುರ್ತು ವಿಷಯಗಳನ್ನು ಆಲಿಸಲು ಮುಖ್ಯ ನ್ಯಾಯಾಧೀಶರು ‘ರಜಾ ಕಾಲದ ಪೀಠಗಳನ್ನು’ ಸ್ಥಾಪಿಸುತ್ತಿದ್ದರು.

ಇತ್ತೀಚೆಗೆ ಪ್ರಕಟವಾದ 2025 ರ ಸುಪ್ರೀಂ ಕೋರ್ಟ್ ಕ್ಯಾಲೆಂಡರ್ ಪ್ರಕಾರ, ಭಾಗಶಃ ನ್ಯಾಯಾಲಯದ ಕೆಲಸದ ದಿನಗಳು 2025ರ ಮೇ 26 ರಿಂದ ಪ್ರಾರಂಭವಾಗಿ ಜುಲೈ 14 ರಂದು ಕೊನೆಗೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.