ADVERTISEMENT

ಕ್ಯಾಸಲ್‌ ರಾಕ್‌– ಕೊಲ್ಲೆಂ ಜೋಡಿ ಹಳಿ: ಅನುಮತಿ ರದ್ದುಪಡಿಸಿದ ‘ಸುಪ್ರೀಂ’

ಕೇಂದ್ರದ ಉನ್ನತಾಧಿಕಾರ ಸಮಿತಿ ಶಿಫಾರಸು ಪರಿಗಣನೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 19:40 IST
Last Updated 9 ಮೇ 2022, 19:40 IST
   

ಪಣಜಿ:ಕರ್ನಾಟಕದ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಗೋವಾದ ಕೊಲ್ಲೆಂ ರೈಲು ನಿಲ್ದಾಣದವರೆಗಿನ ನೈಋತ್ಯ ರೈಲ್ವೆಯ ಮಾರ್ಗವನ್ನು ಜೋಡಿ ಹಳಿ ಮಾರ್ಗವಾಗಿ ಪರಿವರ್ತಿಸುವ ವಿವಾದಾತ್ಮಕ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ್ದ ಹಸಿರು ನಿಶಾನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಪಡಿಸಿದೆ.

ಜೋಡಿ ಹಳಿ ಮಾರ್ಗದ ಯೋಜನೆಯ ಪರಿಸರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ನೇಮಿಸಿದ್ದ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿರುವ ಶಿಫಾರಸುಗಳನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ಈರೈಲು ಮಾರ್ಗ ಹಾದು ಹೋಗಿರುವಪಶ್ಚಿಮ ಘಟ್ಟಗಳು ಯುನೆಸ್ಕೊ ಅನುಮೋದಿಸಿರುವ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಳ
ಗೊಂಡಿದೆ.ಅಲ್ಲಿ ಹೆಚ್ಚುವರಿ ರೈಲು ಹಳಿ ಹಾದುಹೋದರೆ, ವನ್ಯಜೀವಿ ಮತ್ತು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಿಇಸಿ ತನ್ನ ವರದಿಯಲ್ಲಿ ಹೇಳಿದೆ.

ADVERTISEMENT

ರೈಲ್ವೆ ಜೋಡಿ ಹಳಿ ಯೋಜನೆಯ ಹೊರತಾಗಿ, ಗೋವಾ-ಕರ್ನಾಟಕಅರಣ್ಯದ ಗಡಿಯಲ್ಲಿ ಬರುವವಿದ್ಯುತ್‌ ಮಾರ್ಗ ಮತ್ತುರಾಷ್ಟ್ರೀಯ ಹೆದ್ದಾರಿ 4 ಎ ವಿಸ್ತರಣೆಯ ಎರಡು ಯೋಜನೆಗಳು ಪರಿಸರದ ಮೇಲೆ ಉಂಟುಮಾಡುವ ಪರಿಣಾಮವನ್ನು ಅಂದಾಜಿಸುವ ಹೊಣೆಯನ್ನು ‌ಸಿಇಸಿಗೆ ವಹಿಸಲಾಗಿದೆ.

ಇಲ್ಲಿ ಈ ಮೂರು ಯೋಜನೆಗಳು ಜಾರಿಯಾದರೆ ಸುಮಾರು 50 ಸಾವಿರ ಮರಗಳ ಹನನವಾಗಲಿದೆ ಎಂದು ಬಿಜೆಪಿಯೇತರ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ವಾದಿಸಿ, ಯೋಜನೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದವು.
ಗೋವಾದ ಸ್ಥಳೀಯ ಗ್ರೀನ್‌ ಎನ್‌ಜಿಒ ‘ಗೋವಾ ಫೌಂಡೇಶನ್’ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ವಿಚಾರಣೆ ನಡೆಸಿತು.

ಗೋವಾ ಫೌಂಡೇಶನ್‌ನ ಕ್ಲೌಡ್ ಅಲ್ವಾರೆಸ್, ರೈಲ್ವೆಗೆ ಮರು ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಸಿಇಸಿ ಶಿಫಾರಸುಗಳನ್ನು ಸುಪ್ರೀಂಕೋರ್ಟ್‌ ಪರಿಗಣಿಸಿರುವುದು ಗೋವಾಕ್ಕೆ ಸಿಕ್ಕ ವಿಜಯವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.