
ನವದೆಹಲಿ: 'ದೇಗುಲದ ಹಣ ದೇವರಿಗೆ ಸೇರಿದ್ದಾಗಿದೆ. ಆ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್‌ಗಳನ್ನು ಉಳಿಸಲು ಬಳಕೆ ಮಾಡುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಹೇಳಿದೆ.
ತಿರುನೆಲ್ಲಿ ದೇವಸ್ಥಾನ ದೇವಸ್ವಂಗೆ ಠೇವಣಿ ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಕೆಲವು ಸಹಕಾರಿ ಬ್ಯಾಂಕ್‌ಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.
'ದೇಗುಲದ ಹಣದಿಂದ ಬ್ಯಾಂಕ್ ಉಳಿಸಲು ಬಳಸಬೇಕೇ? ಬ್ಯಾಂಕ್‌ಗಳು ಜನರ ವಿಶ್ವಾಸವನ್ನು ಗಳಿಸಬೇಕು. ಗ್ರಾಹಕರನ್ನು ಹಾಗೂ ಠೇವಣಿಗಳನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ ಅದು ನಿಮ್ಮ ಸಮಸ್ಯೆ' ಎಂದು ಅರ್ಜಿಯನ್ನು ತಿರಸ್ಕರಿಸಿದೆ.
'ದೇಗುಲದ ಹಣ ದೇವರಿಗೆ ಸೇರಿದ್ದಾಗಿದೆ. ಸಹಕಾರಿ ಬ್ಯಾಂಕ್‌ಗಳ ಆದಾಯ ಅಥವಾ ರಕ್ಷಣೆಗೆ ಮೂಲವಾಗಲು ಸಾಧ್ಯವಿಲ್ಲ. ಅದರ ಹಣವನ್ನು ದೇವಾಲಯದ ಹಿತಾಸಕ್ತಿಗಾಗಿ ಮಾತ್ರ ಉಳಿತಾಯ ಮಾಡಬೇಕು ಮತ್ತು ಬಳಸಬೇಕು' ಎಂದು ಅಭಿಪ್ರಾಯಪಟ್ಟಿತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿಮಿಟೆಡ್ ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿಂಗ್ ಬ್ಯಾಂಕ್ ಲಿಮಿಟೆಡ್ ಮೇಲ್ಮನವಿಯನ್ನು ಸಲ್ಲಿಸಿತ್ತು.
ದೇವಸ್ಥಾನದ ಸ್ಥಿರ ಠೇವಣಿ ಮರುಪಾವತಿಸಲು ಸಹಕಾರಿ ಬ್ಯಾಂಕ್‌ಗಳು ನಿರಾಕರಿಸಿದ ಕಾರಣ ತಿರುನೆಲ್ಲಿ ದೇವಸ್ವಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ ಎರಡು ತಿಂಗಳೊಳಗೆ ಹಣ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.