ADVERTISEMENT

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2025, 9:40 IST
Last Updated 7 ಏಪ್ರಿಲ್ 2025, 9:40 IST
   

ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್ ಹಾಗೂ ಕೆ.ವಿ.ವಿಶ್ವನಾಥನ್‌ ಅವರನ್ನೊಳಗೊಂಡ ಪೀಠವು ಜಮೀಯತ್‌ ಉಲೆಮಾ ಎ ಹಿಂದ್ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್ ಅವರ ವಾದವನ್ನು ಆಲಿಸಿತು. 

ಈ ವಿಷಯದ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಬೇಕಿದೆ ಎಂದು ಕಪಿಲ್‌ ಸಿಬಲ್‌ ಮನವಿ ಮಾಡಿದರು. ಸಿಬಲ್‌ ಅಲ್ಲದೆ, ಹಿರಿಯ ವಕೀಲರಾದ ಅಭಿಷೇಕ್‌ ಸಿಂಘ್ವಿ ಮತ್ತು ನಿಜಾಮ್ ಪಾಷಾ ಅವರೂ ಇದೇ ವಿಷಯಕ್ಕೆ ಸಂಬಂಧಿಸಿದ ಇತರ ಅರ್ಜಿಗಳನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಕೇಳಿಕೊಂಡರು.

ADVERTISEMENT

ಅರ್ಜಿಗಳನ್ನು ಪೀಠದ ಮುಂದೆ ಪಟ್ಟಿ ಮಾಡುವಂತೆ ಕೋರಿ ಪತ್ರ ಸಲ್ಲಿಸಲು ಅಥವಾ ಮೇಲ್‌ ಕಳುಹಿಸುವಂತೆ ಸಿಜೆಐ ಅವರು ವಕೀಲರಿಗೆ ತಿಳಿಸಿದರು.

ಈಗಾಗಲೇ ಪತ್ರ ಮತ್ತು ಮೇಲ್ ಮಾಡಲಾಗಿದೆ ಎಂದು ಸಿಬಲ್‌ ತಿಳಿಸಿದಾಗ ಸಿಜೆಐ, ‘ಪತ್ರವನ್ನು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ’ ಎಂದರು. ಪಾಷಾ ಅವರು ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರು ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿದರು.

2025ರ ವಕ್ಫ್‌ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದರು. ಸಂಸತ್ತಿನ ಉಭಯ ಸದನಗಳು ಸುದೀರ್ಘ ಚರ್ಚೆಯ ನಂತರ ಈ ಮಸೂದೆಗೆ ಅಂಗೀಕಾರ ನೀಡಿದ್ದವು. 

ಒವೈಸಿ ಅಲ್ಲದೆ ಕಾಂಗ್ರೆಸ್‌ ಸಂಸದ ಮೊಹಮ್ಮದ್ ಜಾವೇದ್ ಮತ್ತು ಎಎಪಿ ಶಾಸಕ ಅಮಾನತ್‌ಉಲ್ಲಾ ಖಾನ್‌ ಅವರೂ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜಮೀಯತ್‌ ಉಲೆಮಾ ಎ ಹಿಂದ್, ಸಮಸ್ತ ಕೇರಳ ಜಮೀಯತುಲ್‌ ಉಲೆಮಾ ಮತ್ತು ಅಸೋಸಿಯೇಷನ್‌ ಫಾರ್‌ ದಿ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌ ಎಂಬ ಎನ್‌ಜಿಒ ಕೂಡಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ.

ಎಐಎಂಪಿಎಲ್‌ಬಿ ಅರ್ಜಿ

ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ವಕ್ಫ್‌ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಭಾನುವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಅರ್ಜಿಯಲ್ಲಿ ವಕ್ಫ್‌ ಕಾಯ್ದೆಯನ್ನು ಬಲವಾಗಿ ಆಕ್ಷೇಪಿಸಿರುವುದಾಗಿ ಎಐಎಂಪಿಎಲ್‌ಬಿ ವಕ್ತಾರ ಎಸ್‌ಕ್ಯುಆರ್‌ ಇಲ್ಯಾಸ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಸಂಸತ್ತು ಅಂಗೀಕರಿಸಿರುವ ತಿದ್ದುಪಡಿಗಳು ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯಲ್ಲದೆ ವಕ್ಫ್‌ ಆಡಳಿತವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸರ್ಕಾರದ ಉದ್ದೇಶವನ್ನು ಬಹಿರಂಗಪಡಿಸಿದೆ’ ಎಂದು ಅರ್ಜಿಯಲ್ಲಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.