
ಸುಪ್ರೀಂ ಕೋರ್ಟ್
ನವದೆಹಲಿ: ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲಿಕ್ಕಾಗಿ ದೇಶದಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ.
ರಾಜಸ್ಥಾನದ ಫಲೋದಿಯಲ್ಲಿ ನವೆಂಬರ್ 2ರಂದು ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠವು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳ ಎರಡೂ ಬದಿಗಳಲ್ಲಿ ಅಕ್ರಮವಾಗಿ ತಲೆಎತ್ತಿರುವ ಢಾಬಾಗಳು ಅಪಘಾತಗಳಿಗೆ ಕಾರಣ ಆಗಿರಲೂಬಹುದು ಎಂದು ಸೋಮವಾರ ಹೇಳಿತು.
ಇಂತಹ ಢಾಬಾಗಳ ವಿರುದ್ಧ ಕ್ರಮಕೈಗೊಳ್ಳಲು ಲಭ್ಯವಿರುವ ಶಾಸನಬದ್ಧ ನಿಯಮಗಳ ವಿವರ ಸಲ್ಲಿಸುವಂತೆ ಪೀಠವು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಅಕ್ರಮ ಢಾಬಾಗಳ ವಿರುದ್ಧ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳು, ಇಂತಹ ಕ್ರಮ ತೆಗೆದುಕೊಳ್ಳುವ ಅಧಿಕಾರವು ಯಾವ ಪ್ರಾಧಿಕಾರದ್ದು ಮತ್ತು ಯಾವೆಲ್ಲಾ ಸಂಸ್ಥೆಗಳು ನಿಬಂಧನೆಗಳನ್ನು ಪಾಲಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆಯೂ ತಿಳಿಸಿದೆ.
‘ಹೆದ್ದಾರಿ ಬದಿಗಳಲ್ಲಿರುವ ಅನಧಿಕೃತ ಢಾಬಾಗಳು ಮತ್ತು ಸಣ್ಣ ಹೋಟೆಲ್‌ಗಳನ್ನು ತೆರವುಗೊಳಿಸುವ ಅಧಿಕಾರ ನಮಗೆ ಇದೆ. ಆದರೆ ಜಿಲ್ಲಾಡಳಿತದ ಕೈಕೆಳಗಿರುವ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರಿಗೆ ಆ ವಿಷಯದಲ್ಲಿ ನಮಗಿಂತಲೂ ಹೆಚ್ಚಿನ ಅಧಿಕಾರ ಇದೆ. ಆದ್ದರಿಂದ, ಈ ವಿಚಾರದಲ್ಲಿ ನಾವು ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ’ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
ಭಾರತ್‌ಮಾಲಾ ಹೆದ್ದಾರಿಯಲ್ಲಿ ರಾಜಸ್ಥಾನದ ಫಲೋದಿ ಎಂಬಲ್ಲಿ ನಿಂತಿದ್ದ ಟ್ರಕ್‌ವೊಂದಕ್ಕೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದು 10 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದರು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 10ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಫಲೋದಿ ಮೂಲಕ ಹಾದುಹೋಗುವ ಹೆದ್ದಾರಿ ಬದಿಯಲ್ಲಿರುವ ಢಾಬಾಗಳ ಸಂಖ್ಯೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವನ್ನು ಕೇಳಿತ್ತು.
‘ಈ ವಿಷಯವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ಚಿಂತಿಸುತ್ತಿದೆ’ ಎಂದು ನ್ಯಾಯಮೂರ್ತಿ ಜೆ.ಕೆ.ಮಾಹೇಶ್ವರಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಎ.ಎನ್.ಎಸ್.ನಾಡಕರ್ಣಿ ‘ಹೆದ್ದಾರಿಗಳ ಬದಿಗಳಲ್ಲಿ ವ್ಯಾಪಕವಾಗಿ ಒತ್ತುವರಿ ನಡೆದಿರುವುದನ್ನು ತೋರಿಸಲು ಗೂಗಲ್ ಚಿತ್ರಗಳನ್ನು ಸಲ್ಲಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.