
ಸುಪ್ರೀಂ ಕೋರ್ಟ್
ನವದೆಹಲಿ: ಅರಾವಳಿ ಪರ್ವತ ಶ್ರೇಣಿ ಎಂದರೆ ಯಾವುದು ಎಂಬ ವ್ಯಾಖ್ಯಾನ ಬದಲಿಸಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಇಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಗಣಿಗಾರಿಕೆ ಮತ್ತು ಇದರಿಂದ ಪರಿಸರಕ್ಕೆ ಆಗುತ್ತಿರುವ ಹಾನಿ, ಜೊತೆಗೆ ಅರಾವಳಿಯ ವ್ಯಾಖ್ಯಾನ ಏನಾಗಬೇಕು ಎಂಬ ಕುರಿತು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸುವುದಾಗಿ ಹೇಳಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು 2025ರ ಡಿ.29ರಿಂದ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದೆ. ಇದರ ಭಾಗ ವಾಗಿ ಬುಧವಾರ ವಿಚಾರಣೆ ನಡೆಸಿತು.
ತಜ್ಞರ ಸಮಿತಿಯಲ್ಲಿ ಯಾರು ಇರಬೇಕು ಎಂಬ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ಕೆ.ಎಂ. ನಟರಾಜ್, ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಅಮ್ಯುಕಸ್ ಕ್ಯೂರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಪರಮೇಶ್ವರ ಅವರ ಸಲಹೆಯನ್ನು ಪೀಠ ಕೇಳಿತು. ಪರಿಸರವಾದಿಗಳು ಮತ್ತು ಅರಣ್ಯ ತಜ್ಞರ ಹೆಸರುಗಳನ್ನು ನಾಲ್ಕು ವಾರಗಳ ಒಳಗೆ ನೀಡಬೇಕು ಎಂದೂ ಗಡುವು ನೀಡಿತು.
ಈ ಸಮಿತಿಯು ಸುಪ್ರೀಂ ಕೋರ್ಟ್‌ನ ನಿರ್ದೇಶನ ಮತ್ತು ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಪೀಠ ಹೇಳಿತು. ಅರಾವಳಿ ಪರ್ವತ ಶ್ರೇಣಿ ಯಾವುದು ಎಂಬ ಮರುವ್ಯಾಖ್ಯಾನಕ್ಕೆ ಒಪ್ಪಿಗೆ ನೀಡಿದ್ದ ತನ್ನ ಆದೇಶಕ್ಕೆ ಈ ಹಿಂದೆಯೇ ನ್ಯಾಯಾಲಯ ತಡೆ ನೀಡಿತ್ತು. ಈ ತಡೆಯನ್ನು ಬುಧವಾರ ಮುಂದಿನ ಆದೇಶದವರೆಗೂ ವಿಸ್ತರಿಸಿತು.
‘ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ’
‘ಪರ್ವತ ಶ್ರೇಣಿಯ ಕೆಲವು ಭಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಮರಗಳನ್ನು ಕಡಿಯಲಾಗುತ್ತಿದೆ. ಇದನ್ನು ನಿಲ್ಲಿಸಲೇಬೇಕು’ ಎಂದು ರಾಜಸ್ಥಾನದ ರೈತರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಪೀಠದ ಗಮನಕ್ಕೆ ತಂದರು.
‘ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ತಂದರೆ, ನಾವು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಗಣಿಗಾರಿಕೆಯು ಸರಿಪಡಿಸಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ತಂದೊಡ್ಡುತ್ತದೆ ಮತ್ತು ಇದು ಅಪರಾಧ. ಆದ್ದರಿಂದ ಇದನ್ನು ನಿಲ್ಲಿಸಲೇಬೇಕು’ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು. ‘ರಾಜಸ್ಥಾನ ಸರ್ಕಾರವು ಈ ವಿಚಾರ ವನ್ನು ಕೂಡಲೇ ಗಮನಿಸಬೇಕು’ ಎಂದು ಪೀಠ ಸೂಚಿಸಿತು. ರಾಜಸ್ಥಾನ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಇದಕ್ಕೆ ಪ್ರತಿಕ್ರಿಯಿಸಿ, ‘ಅಕ್ರಮ ಗಣಿಗಾರಿಕೆ ಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಎ.ಡಿ. ಸಿಂಗ್ ಎಂಬುವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮಧ್ಯಂತರ ಅರ್ಜಿ ಸಲ್ಲಿಸಿದರು.
‘ಅರಾವಳಿ ಪರ್ವತ ಶ್ರೇಣಿಯನ್ನು ವ್ಯಾಖ್ಯಾನಿಸಲು ಬರುವುದಿಲ್ಲ. ಬೆಟ್ಟಗಳನ್ನೇ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಭೂ ಪದರಗಳ ಅಡಿಯ ಪದರಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಅರಾವಳಿ ವಿಚಾರದಲ್ಲಿ ಈ ಪದರವು ಗುಜರಾತ್‌ನಿಂದ ಉತ್ತರ ಪ್ರದೇಶದ ತುದಿಯವರೆಗೂ ಇದೆ. ಅರಾವಳಿಯನ್ನು ವ್ಯಾಖ್ಯಾನಿಸಲು ಇಳಿದರೆ, ಸಮಸ್ಯೆ ಅಲ್ಲಿಂದಲೇ ಆರಂಭವಾಗುತ್ತದೆ. ಮೊದಲಿಗೆ ಈ ವಿಚಾರವನ್ನು ವಿಚಾರಣೆಗೆ ಪರಿಗಣಿಸಬೇಕು’ ಎಂದು ಸಿಬಲ್ ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.