ADVERTISEMENT

ಎಸ್‌ಐಆರ್‌ ನಿಷ್ಪಕ್ಷಪಾತವಾಗಿರಲಿ: ಸುಪ್ರೀಂ ಕೋರ್ಟ್‌

ಸಹಜ ನ್ಯಾಯ ತತ್ವಗಳಿಗೆ ಅನುಗುಣವಾಗಿ ಇರಬೇಕು: ನ್ಯಾಯಾಲಯ ನಿರ್ದೇಶನ

ಪಿಟಿಐ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್‌) ಸಹಜ ನ್ಯಾಯ ತತ್ವಗಳಿಗೆ ಅನುಗುಣವಾಗಿ ಇರಬೇಕು. ಈ ಪ್ರಕ್ರಿಯೆ ನ್ಯಾಯೋಚಿತವಾಗಿ ಹಾಗೂ ನಿಷ್ಪಕ್ಷಪಾತದಿಂದ ಕೂಡಿರಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಎಸ್‌ಐಆರ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ವೇಳೆ, ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್‌ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಈ ಮಾತು ಹೇಳಿದೆ.

ADVERTISEMENT

ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ,‘ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 21(3) ಅಡಿ, ಯಾವುದೇ ಕ್ಷೇತ್ರದಲ್ಲಿ ಅಥವಾ ಕ್ಷೇತ್ರದ ಒಂದು ಭಾಗದಲ್ಲಿ ಯಾವುದೇ ಸಮಯದಲ್ಲಿಯಾದರೂ ಎಸ್‌ಐಆರ್‌ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ’ ಎಂದು ಪೀಠಕ್ಕೆ ತಿಳಿಸಿದರು.

ಕಾಯ್ದೆಯ ಸೆಕ್ಷನ್‌ 21(3) ಉಲ್ಲೇಖಿಸಿದ ಪೀಠ,‘ಎಸ್‌ಐಆರ್‌ ನಡೆಸುವ ವೇಳೆ ಆಯೋಗವು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂಬುದಾಗಿ ನಾವು ನಿರೀಕ್ಷೆ ಮಾಡಬಾರದೇಕೆ’ ಎಂದು ಪ್ರಶ್ನಿಸಿತು.

‘ಮತದಾರರ ಪಟ್ಟಿಯ ಪರಿಷ್ಕರಣೆಗೆ ಅನುಸರಿಸುವ ವಿಧಾನ ಹಾಗೂ ಕಾರಣಗಳು ನ್ಯಾಯೋಚಿತವಾಗಿ ಹಾಗೂ ನಿಷ್ಪಕ್ಷಪಾತವಾಗಿದ್ದಾಗ, ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಮೀರಿ ಕ್ರಮ ಕೈಗೊಳ್ಳುವುದಕ್ಕೆ ಈ ಕಾಯ್ದೆ ಆಯೋಗಕ್ಕೆ ಅನುಮತಿ ನೀಡುತ್ತದೆ’ ಎಂದೂ ದ್ವಿವೇದಿ ತಿಳಿಸಿದರು.

ಆಗ ಇದಕ್ಕೆ ಪ್ರತಿಕ್ರಿಯಿಸಿದ ಪೀಠ,‘ಎಸ್‌ಐಆರ್‌ ನಡೆಸುವ ವಿಧಾನವು ನಿಷ್ಪಕ್ಷಪಾತದಿಂದ ಕೂಡಿರಬೇಕು’ ಎಂದು ಹೇಳಿತು.

‘ಪಶ್ಷಿಮ ಬಂಗಾಳದ ಮತದಾರರ ಪಟ್ಟಿಯಲ್ಲಿ ಹಲವು ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿವೆ. ಇಬ್ಬರು ಮತದಾರರು 200ಕ್ಕೂ ಹೆಚ್ಚು ಮಕ್ಕಳು ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಏಳು ಮತದಾರರು ತಲಾ 100 ಮಕ್ಕಳನ್ನು, 10 ಮತದಾರರು ತಲಾ 50ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಇದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಚುನಾವಣಾ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.