
ಎಐ ಚಿತ್ರ
ಸೂರತ್: ತಂದೆಯ ಇಚ್ಚೆಗೆ ವಿರುದ್ಧವಾಗಿ 7 ವರ್ಷದ ಮಗಳನ್ನು ಜೈನ ಸನ್ಯಾಸಿನಿಯನ್ನಾಗಿ (ಸಾದ್ವಿ) ಮಾಡಲು ಹೊರಟಿದ್ದ ತಾಯಿಯ ನಿರ್ಧಾರಕ್ಕೆ ಸೂರತ್ ಕೌಟುಂಬಿಕ ನ್ಯಾಯಾಲಯ ತಡೆ ಒಡ್ಡಿದೆ.
ಈ ಅಪರೂಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಡಿ.20 ರಂದು ಸೂರತ್ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌ವಿ ಮಾನ್ಸುರಿ ಅವರು ಅರ್ಜಿದಾರರ ಅರ್ಜಿ ಪುರಸ್ಕರಿಸಿ ತಡೆಯಾಜ್ಞೆ ನೀಡಿದ್ದಾರೆ.
ಏನಿದು ಪ್ರಕರಣ?
ಮುಂಬೈ ಮೂಲದ ಜೈನ ಸಮುದಾಯದ ಮಹಿಳೆಯೊಬ್ಬರು ಸೂರತ್‌ನ ವ್ಯಕ್ತಿಯೊಬ್ಬರನ್ನು 2012 ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ 5 ವರ್ಷದ ಮಗ, 7 ವರ್ಷದ ಮಗಳಿದ್ದಾಳೆ.
ಮಹಿಳೆ ತನ್ನ 7 ವರ್ಷದ ಮಗಳನ್ನು ಜೈನ ಸನ್ಯಾನಿಸಿನಿಯಾಗಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ಈ ವಿಚಾರಕ್ಕೆ ಅವರ ಪತಿಯ ವಿರೋಧವಿತ್ತು. ಇದೇ ಕಾರಣದಿಂದ ಕಳೆದ 2024 ರ ಏಪ್ರಿಲ್‌ನಲ್ಲಿ ತನ್ನಿಬ್ಬರೂ ಮಕ್ಕಳನ್ನು ಕರೆದುಕೊಂಡು ಪತಿಯನ್ನು ತೊರೆದು ಮುಂಬೈನಲ್ಲಿ ಪೋಷಕರ ಜೊತೆ ನೆಲೆಸಿದ್ದರು.
ಆದರೆ, ಪತಿಯ ವಿರೋಧ ಲೆಕ್ಕಿಸದೇ ಮಗಳನ್ನು ಸನ್ಯಾಸಿಯನ್ನಾಗಿ ಮಾಡಲೇಬೇಕು ಎಂದು ತಾಯಿ ನಿರ್ಧರಿಸಿದ್ದರು. ಫೆಬ್ರುವರಿ 2 ರಂದು ಸೂರತ್‌ನಲ್ಲಿ ದೀಕ್ಷೆ ಕೊಡಿಸಬೇಕೆಂದು ಹಠ ತೊಟ್ಟಿದ್ದರು.
ಈ ವಿಚಾರ ತಿಳಿದ ಮಹಿಳೆಯ ಪತಿ ಸಿಟ್ಟಿಗೆದ್ದು, ಕಳೆದ ಡಿಸೆಂಬರ್ 12 ರಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ‘ಬಾಲಕಿ ಇನ್ನೂ ಚಿಕ್ಕವಳಿರುವುದರಿಂದ ತಾಯಿಯ ನಿರ್ಧಾರ ಸರಿ ಹೋಗುವುದಿಲ್ಲ’ ಎಂದು ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತಡೆ ನೀಡಿದೆ.
‘ಬಾಲಕಿಯನ್ನು ಬಾಲಕಿಯ ತಾಯಿ ದೀಕ್ಷಾ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬೇಕು’ ಎಂದು ಕೋರ್ಟ್ ಹೇಳಿ ಮುಂದಿನ ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಿದೆ.
ಬಾಲಕಿಯ ತಾಯಿಯ ಹಠದ ಬಗ್ಗೆ ಬಾಲಕಿಯ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ಇದೆಲ್ಲ ನನ್ನ ಇಚ್ಚೆಗೆ ವಿರುದ್ಧವಾಗಿ ನಡೆಯುತ್ತಿದೆ. ನನ್ನ ಮಕ್ಕಳನ್ನು ನನ್ನ ಸುಪರ್ಧಿಗೆ ಒಪ್ಪಿಸಬೇಕು. ಮಗಳನ್ನು ಮುಂಬೈ ಹಾಗೂ ಸೂರತ್‌ನ ಜೈನ ಆಶ್ರಮದಲ್ಲಿ ಒಬ್ಬಳನ್ನೇ ಹೆಂಡತಿ ಬಿಟ್ಟು ಬಂದಿದ್ದಳು. ಇದು ಸರಿ ಅಲ್ಲ‘ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.