ADVERTISEMENT

ಶಿಕ್ಷೆಗೆ ತಡೆ ಕೋರಿದ್ದ ರಾಹುಲ್‌ ಮೇಲ್ಮನವಿ: 20ರಂದು ಆದೇಶ ಪ್ರಕಟಿಸಲಿದೆ ಕೋರ್ಟ್‌

ಪಿಟಿಐ
Published 13 ಏಪ್ರಿಲ್ 2023, 12:50 IST
Last Updated 13 ಏಪ್ರಿಲ್ 2023, 12:50 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ಸೂರತ್‌: ‘ಮೋದಿ’ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ವಿಧಿಸಲಾಗಿರುವ ಶಿಕ್ಷೆಗೆ ತಡೆಯಾಜ್ಞೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲ್ಲಿಸಿರುವ ಮೇಲ್ಮನವಿಯ ಕುರಿತ ಆದೇಶವನ್ನು ಏಪ್ರಿಲ್ 20ರಂದು ಪ್ರಕಟಿಸುವುದಾಗಿ ಸೂರತ್‌ ಸೆಷನ್ಸ್ ನ್ಯಾಯಾಲಯ ಗುರುವಾರ ತಿಳಿಸಿದೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್. ಪಿ. ಮೊಗೇರ, ಏಪ್ರಿಲ್ 20 ರಂದು ಆದೇಶವನ್ನು ಪ್ರಕಟಿಸುವುದಾಗಿ ಹೇಳಿದರು.

ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ 2019ರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ ಅವರು ‘ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಉಪನಾಮ ಇರುತ್ತದೆ ಹೇಗೆ...’ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ದಾಖಲಾಗಿದ್ದ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ADVERTISEMENT

ಶಿಕ್ಷೆ ಪ್ರಕಟವಾದ ಬೆನ್ನಿಗೇ, ರಾಹುಲ್‌ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

ತೀರ್ಪಿನ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವ ರಾಹುಲ್‌ ಗಾಂಧಿ ಶಿಕ್ಷೆಗೆ ತಡೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.