ADVERTISEMENT

ಹಿರಿಯ ನಾಗರಿಕರ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಕೇಂದ್ರ ಸಚಿವ ಗೋಪಿ: ಟೀಕೆ

ಸುಳ್ಳು ಭರವಸೆ ನೀಡುವುದಿಲ್ಲ: ಗೋಪಿ ಸಮರ್ಥನೆ

ಪಿಟಿಐ
Published 15 ಸೆಪ್ಟೆಂಬರ್ 2025, 15:30 IST
Last Updated 15 ಸೆಪ್ಟೆಂಬರ್ 2025, 15:30 IST
ಸುರೇಶ್‌ ಗೋಪಿ
ಸುರೇಶ್‌ ಗೋಪಿ   

ತ್ರಿಶ್ಶೂರ್/ ತಿರುವನಂತಪುರ: ಶಿಥಿಲಗೊಂಡ ಮನೆಯನ್ನು ಪುನರ್‌ನಿರ್ಮಿಸಿಕೊಡುವಂತೆ ಕೋರಿ ಹಿರಿಯ ನಾಗರಿಕರೊಬ್ಬರು ನೀಡಿದ ಮನವಿಯನ್ನು ಸ್ವೀಕರಿಸಲು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ನಿರಾಕರಿಸಿದ್ದಾರೆ. 

ತ್ರಿಶ್ಶೂರ್‌ ಜಿಲ್ಲೆಯ ಪುಲ್ಲು ಎಂಬಲ್ಲಿ ಸೆ.12ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಚುವೇಲಾಯುಧನ್‌ ಎಂಬವರು ಲಿಖಿತ ಮನವಿ ನೀಡಲು ಮುಂದಾಗಿದ್ದರು. ಸಾರ್ವಜನಿಕವಾಗಿ ಮನವಿ ಸ್ವೀಕರಿಸಲು ಸಚಿವರು ನಿರಾಕರಿಸಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 

ಇದನ್ನು ಸಮರ್ಥಿಸಿಕೊಂಡಿರುವ ಸುರೇಶ್ ಗೋಪಿ, ‘ನಾನು ಈಡೇರಿಸಲಾಗದ ಭರವಸೆಗಳನ್ನು ನೀಡುವುದಿಲ್ಲ. ವಸತಿಗೆ ಸಂಬಂಧಿಸಿದ ವಿಷಯವು ರಾಜ್ಯಕ್ಕೆ ಸಂಬಂಧಿಸಿದ್ದು. ಅದನ್ನು ರಾಜ್ಯ ಸರ್ಕಾರವೇ ಪರಿಗಣಿಸಬೇಕು. ಈ ಘಟನೆಯನ್ನು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಗೋಪಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಮನೆ ನಿರ್ಮಿಸುವ ಭರವಸೆ: ಕೊಚುವೇಲಾಯುಧನ್‌ ಅವರಿಗೆ ಮನೆ ನಿರ್ಮಿಸಿಕೊಡುವುದಾಗಿ ಸಿಪಿಎಂನ ಸ್ಥಳೀಯ ನಾಯಕರೊಬ್ಬರು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.