ದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಯನ್ನು ಮುಂಬೈ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಿಹಾರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರಾಜಕೀಯ ಪ್ರೇರಿತ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ವಾದಿಸಿದ್ದಾರೆ.
ಅಲ್ಲದೆ, ಸುಶಾಂತ್ ಪ್ರಕರಣದಲ್ಲಿ ತಾವು ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.
ತಮ್ಮ ವಿರುದ್ಧ ಬಿಹಾರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ಮುಂಬೈಗೆ ವರ್ಗಾಯಿಸಬೇಕೆಂದು ಕೋರಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿರುವ ಮುಂಬೈ ಪೊಲೀಸರು, ಸುಪ್ರೀಂ ಕೋರ್ಟ್‌ನಲ್ಲಿರುವ ಈ ಪ್ರಕರಣದಲ್ಲಿ ತೀರ್ಪು ಬರುವವರೆಗೆ ಸಿಬಿಐ ಕಾಯಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ ಸಂಭವಿಸಿದ ಪ್ರಕರಣದ ತನಿಖೆ ನಡೆಸುವುದು ಅಥವಾ ಸಾಕ್ಷಿಗಳನ್ನು ಪರೀಕ್ಷಿಸುವುದು ಬಿಹಾರ ಪೊಲೀಸರ ವ್ಯಾಪ್ತಿಗೆ ಬರುವುದೇ ಇಲ್ಲ. ಅಲ್ಲದೆ, ಮುಂಬೈ ಮತ್ತು ಬಿಹಾರ ಪೊಲೀಸರ ಏಕಕಾಲದ ತನಿಖೆಯಲ್ಲಿ ಮುಂಬೈ ಪೊಲೀಸರ ಸಹಕಾರದ ವಿಷಯವೇ ಉದ್ಭವಿಸುವುದಿಲ್ಲ. ಮುಂಬೈನಲ್ಲಿ ಸಂಭವಿಸಿರುವ ಪ್ರಕರಣದ ಬಗ್ಗೆ ಬಿಹಾರದಲ್ಲಿ ಎಫ್‌ಐಆರ್ ದಾಖಲಿಸುವುದು ರಾಜಕೀಯ ಪ್ರೇರಿತ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ ಎಂದು ಪ್ರಕರಣ ತನಿಖಾಧಿಕಾರಿ ಬಾಂದ್ರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಬಿಹಾರ ಪೊಲೀಸರು ಕೇವಲ 'ಶೂನ್ಯ ಎಫ್‌ಐಆರ್' (ಅಪರಾಧವು ತನ್ನ ವ್ಯಾಪ್ತಿಯಲ್ಲಿ ಬರದಂತೆ) ನೋಂದಾಯಿಸಿ ಮುಂಬೈಗೆ ಕಳುಹಿಸಬೇಕಿತ್ತು. ಅಲ್ಲದೆ, ಎಫ್‌ಐಆರ್ ಅನ್ನು ಸಿಬಿಐಗೆ ವರ್ಗಾಯಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ಮುಂಬೈ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಒಂದು ರಾಜ್ಯದ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಮತ್ತೊಂದು ರಾಜ್ಯದ ಪೊಲೀಸರು ತನಿಖೆ ನಡೆಸುವುದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಪೊಲೀಸರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಲ್ಲದೆ, ಪ್ರಕರಣದ ತನಿಖೆಗಾಗಿ ಬಿಹಾರದಿಂದ ಬಂದ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯನ್ನು, ತನಿಖೆಗೆ ಅಡ್ಡಿಪಡಿಸಬೇಕೆಂಬ ಉದ್ದೇಶದಿಂದ ಕ್ವಾರಂಟೈನ್ ಮಾಡಿಲ್ಲ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಹೊರ ರಾಜ್ಯದವರ ವಿಚಾರದಲ್ಲಿ ಅನುಸರಿಸುವ ಶಿಷ್ಟಾಚಾರವನ್ನೇ ಐಪಿಎಸ್ ಅಧಿಕಾರಿ ವಿಚಾರದಲ್ಲೂ ಅನುಸರಿಸಲಾಗಿದೆ ಎಂದೂ ಇದೇ ವೇಳೆ ಮುಂಬೈ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.