ADVERTISEMENT

ವಿದೇಶದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣ ಪತ್ತೆ

ಪಿಟಿಐ
Published 25 ಜುಲೈ 2022, 2:31 IST
Last Updated 25 ಜುಲೈ 2022, 2:31 IST
ಮಂಕಿಪಾಕ್ಸ್‌ ವೈರಾಣು (ಚಿತ್ರಕೃಪೆ: ವಿಶ್ವ ಆರೋಗ್ಯ ಸಂಸ್ಥೆ)
ಮಂಕಿಪಾಕ್ಸ್‌ ವೈರಾಣು (ಚಿತ್ರಕೃಪೆ: ವಿಶ್ವ ಆರೋಗ್ಯ ಸಂಸ್ಥೆ)   

ಹೈದರಾಬಾದ್‌: ವಿದೇಶದಿಂದ ಕಾಮರೆಡ್ಡಿ ಜಿಲ್ಲೆಗೆ ವಾಪಸ್‌ ಆಗಿರುವ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಅವರನ್ನು ಜಿಲ್ಲೆಯ ಸರ್ಕಾರಿ ಜ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸೋಂಕು ಲಕ್ಷಣ ಕಾಣಿಸಿಕೊಂಡಿರುವ ವ್ಯಕ್ತಿಯು ಕುವೈತ್‌ನಿಂದ ಜುಲೈ 6 ರಂದು ಆಗಮಿಸಿದ್ದರು. ಅವರಲ್ಲಿ ಜುಲೈ 20ರಂದು ಜ್ವರ ಕಾಣಿಸಿಕೊಂಡಿತ್ತು. ಅವರು ಜುಲೈ 23ರಂದು ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಕಿಪಾಕ್ಸ್‌ ಲಕ್ಷಣ ಕಾಣಿಸಿಕೊಂಡ ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಜ್ವರ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ. ಶ್ರೀನಿವಾಸ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಗಿಯ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆಪರೀಕ್ಷೆಗಾಗಿ ಕಳುಹಿಸಲಾಗುವುದು. ವರದಿ ಬರುವವರೆಗೆ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು ಎಂದೂ ಹೇಳಿದ್ದಾರೆ.

ADVERTISEMENT

'ರೋಗಿಯ ಸಂಪರ್ಕಕ್ಕೆ ಬಂದಿರುವ ಆರು ಜನರನ್ನು ಗುರುತಿಸಲಾಗಿದೆ. ಅವರಲ್ಲಿ ಇದುವರೆಗೆ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿಲ್ಲ. ಆದಾಗ್ಯೂ ಅವರನ್ನೂ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ.ತೆಲಂಗಾಣ ಆರೋಗ್ಯ ಸಚಿವ ಟಿ.ಹರೀಶ್ ರಾವ್‌ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಅವರ ನಿರ್ದೇಶನಗಳಿಗೆ ಅನುಸಾರವಾಗಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದುಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.