ADVERTISEMENT

ಅಜಿತ್‌ –ಸುಪ್ರಿಯಾ ಇಬ್ಬರಲ್ಲಿ ಉತ್ತರಾಧಿಕಾರಿ ಯಾರು? ಕುತೂಹಲ ಹೆಚ್ಚಿಸಿದ ಸಮಿತಿ ಸಭೆ

ಪಿಟಿಐ
Published 4 ಮೇ 2023, 16:18 IST
Last Updated 4 ಮೇ 2023, 16:18 IST
ಸುಪ್ರಿಯಾ ಸುಳೆ, ಶರದ್‌ ಪವಾರ್‌, ಅಜಿತ್‌ ಪವಾರ್‌, ಪಾರ್ಥ ಪವಾರ್‌
ಸುಪ್ರಿಯಾ ಸುಳೆ, ಶರದ್‌ ಪವಾರ್‌, ಅಜಿತ್‌ ಪವಾರ್‌, ಪಾರ್ಥ ಪವಾರ್‌   

ಮುಂಬೈ: ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ ಘೋಷಿಸಿದ ಎರಡು ದಿನಗಳ ನಂತರ ಅವರ ಉತ್ತರಾಧಿಕಾರಿ ಸ್ಥಾನವನ್ನು ಅಜಿತ್‌ ಪವಾರ್‌ ಅಥವಾ ಸುಪ್ರಿಯಾ ಸುಳೆ ಅಥವಾ ಕುಟುಂಬದ ಹೊರಗಿನವರು ವಹಿಸಿಕೊಳ್ಳಬಹುದಾ? ಎನ್ನುವ ಕುತೂಹಲವನ್ನು ಶುಕ್ರವಾರ ನಡೆಯಲಿರುವ ಪಕ್ಷದ ಮಹತ್ವದ ಸಭೆ ಹೆಚ್ಚಿಸಿದೆ. 

 ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕಳೆದ 24 ವರ್ಷಗಳಿಂದ ಪ್ರಮುಖ ಪಾತ್ರ ವಹಿಸಿರುವ ಶರದ್‌ ಪವಾರ್ ಅವರು, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ. ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ತಮ್ಮ ಉತ್ತರಾಧಿಕಾರಿ ಆಯ್ಕೆಗೆ ಅವರು ಸಮಿತಿ ರಚಿಸಿದ್ದರು.

ರಾಜೀನಾಮೆ ಪ್ರಕಟಿಸಿದ ನಂತರ ಮೊದಲ ಬಾರಿಗೆ ನರೀಮನ್‌ ಪಾಯಿಂಟ್‌ನಲ್ಲಿರುವ ಯಶವಂತರಾವ್‌ ಚವಾಣ್‌ ಸಂಭಾಂಗಣದಲ್ಲಿ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿರುವ ಪವಾರ್‌, ಪಕ್ಷದ ಭವಿಷ್ಯ ಮತ್ತು ಹೊಸ ನಾಯಕತ್ವಕ್ಕಾಗಿ ರಾಜೀನಾಮೆ ಪ್ರಕಟಿಸಿದ್ದಾಗಿ ಸ್ಪಷ್ಟಪಡಿಸಿರುವ ಜತೆಗೆ, ಸಮಿತಿಯು ಸಭೆ ಸೇರಿ ಚರ್ಚಿಸಲಿದೆ ಎಂದೂ ಹೇಳಿದರು. ‘ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವೆ. ಮುಂದಿನ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವೆ’ ಎಂದೂ ಹೇಳಿದರು.

ADVERTISEMENT

‘ರಾಜೀನಾಮೆ ಹಿಂಪಡೆಯಲು ಒತ್ತಡ ಹೆಚ್ಚುತ್ತಿದ್ದರೂ ಪವಾರ್‌ ಅವರು ತಮ್ಮ ನಿರ್ಧಾರದಿಂದ ಹಿಂದೆಸರಿಯುವಂತೆ ತೋರದಿರುವುದು ತಿಳಿದುಬಂದಿದೆ. ಆದರೆ, ಮುಂದಿನ ಚುನಾವಣೆಯವರೆಗೆ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ’ ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್‌ ಪಾಟೀಲ್ ಹೇಳಿದ್ದಾರೆ. 

ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ನೇತೃತ್ವದಲ್ಲಿ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿನ ಎನ್‌ಸಿಪಿ ಕಚೇರಿಯಲ್ಲಿ ಸಮಿತಿ ಸಭೆ ಸೇರಿ ಚರ್ಚೆ ನಡೆಸಲಿದೆ. ಸಭೆಯ ನಂತರ ಪಕ್ಷದ ಹಿರಿಯ ನಾಯಕರ ಗುಂಪು, ಪವಾರ್ ಅವರನ್ನು ಅವರ ನಿವಾಸ ಸಿಲ್ವರ್‌ ಓಕ್‌ನಲ್ಲಿ ಭೇಟಿಯಾಗಿ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ತಿಳಿಸಲಿದೆ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.