ADVERTISEMENT

ಮಧ್ಯಪ್ರದೇಶ: ಸಿ.ಎಂ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕಾತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2023, 15:46 IST
Last Updated 6 ಡಿಸೆಂಬರ್ 2023, 15:46 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ಭೋಪಾಲ್‌: ಮಧ್ಯಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಊಹಾಪೋಹಗಳು ವ್ಯಾಪಕವಾಗಿ ಹರಡುತ್ತಿವೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಏಳು ಸಂಸದರಲ್ಲಿ ಐವರು ಜಯ ಗಳಿಸಿದ್ದು ಇವರು ಬುಧವಾರ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ರಾಜ್ಯ ಶಾಸಕಾಂಗ ಪಕ್ಷದಿಂದ ಈಗಾಗಲೇ ಆಕಾಂಕ್ಷಿಗಳ ಉದ್ದ ಪಟ್ಟಿಯೇ ಸಿದ್ಧವಾಗಿದೆ. ಐವರು ಸಂಸದರ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಆಯ್ಕೆ ಕಾರ್ಯ ಮತ್ತಷ್ಟು ಸಂಕೀರ್ಣವಾದಂತೆ ಕಾಣುತ್ತಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ  ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರೂ ಕೇಳಿ ಬಂದಿದೆ.

ADVERTISEMENT

ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಂಸದರಲ್ಲಿ ನರೇಂದ್ರ ಸಿಂಗ್‌ ತೋಮರ್ ಮತ್ತು ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರ ಹೆಸರು ಮಧ್ಯಪ್ರದೇಶದ ಮುಖ್ಯಮಂತ್ರಿ  ಸ್ಥಾನದ ಸ್ಪರ್ಧಿಗಳಲ್ಲಿ ಮುಂಚೂಣಿಯಲ್ಲಿದೆ. ಇತರ ಶಾಸಕರಿಗೆ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಬಹುದು ಎಂಬ ಲೆಕ್ಕಾಚಾರವಿದೆ.  ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 29 ಸ್ಥಾನಗಳನ್ನು ಗೆಲ್ಲಿಸುವ ಪ್ರಮಖ ಹೊಣೆಗಾರಿಕೆಯೂ ಇವರ ಮೇಲಿರಲಿದೆ.

ಈ ಮಧ್ಯೆ ಹಾಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರು ಈಗಾಗಲೇ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಮಿಷನ್‌ 29 ರ ಪ್ರಕಾರ ಚೌಹಾಣ್‌ ಅವರು ಬುಧವಾರ ಕಮಲ್‌ನಾಥ್‌ ಅವರ ಕ್ಷೇತ್ರವಾದ ಛಿಂದವಾಡಾಕ್ಕೆ ತೆರಳಿದ್ದಾರೆ. ಅಲ್ಲಿ ಅವರು ‘ಲಾಡ್ಲಿ ಬೆಹ್‌ನಾ’ ಕಾರ್ಯಕ್ರಮದಲ್ಲಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಿಮ್ಮ ಮಾಮಾ (ಸ್ವತಃ ಚೌಹಾಣ್‌) ರಾಜ್ಯದಲ್ಲಿ ನಿರಂತರ ಪ್ರವಾಸ ಕೈಗೊಂಡಿದ್ದರೆ, ನಿಮ್ಮ ದಾದಾಜಿ (ಕಮಲ್‌ನಾಥ್‌) ಛಿಂದವಾಡಾದಲ್ಲಿ ಮಾತ್ರ ಸಿಲುಕಿಕೊಂಡಿದ್ದರು. ಬಿಜೆಪಿಗೆ ಅವರು ಮುಕ್ತ  ಅವಕಾಶ ಬಿಟ್ಟುಕೊಟ್ಟರು. ಬಿಜೆಪಿ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಮರಳಿದೆ. ಏಳು ಕ್ಷೇತ್ರಗಳಲ್ಲಿ ಪಕ್ಷ ಸೋತಿದ್ದರೂ ಈಗ ಛಿಂದವಾಡಾ ಸೇರಿದಂತೆ ಲೋಕಸಭೆಯ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ತಕ್ಕ ಸಿದ್ಧತೆ ಮಾಡಿಕೊಳ್ಳುತ್ತೇವೆ’ಎಂದರು.

‘ಚುನಾವಣೆ ವೇಳೆ ನಾನು ನನ್ನ ಕ್ಷೇತ್ರವಾದ ಬುಧ್ನಿಯಲ್ಲಿ ಎಂದಿಗೂ ಪ್ರಚಾರವನ್ನೇ ಮಾಡಿರಲಿಲ್ಲ. ನೀನು 1 ಲಕ್ಷಕ್ಕಿಂತ ಹೆಚ್ಚು ಮತಗಳಿಂದ  ಗೆದ್ದು ಸರ್ಕಾರ ರಚಿಸುವುದು ಖಚಿತ   ಎಂದು ಜನರು ಆಶ್ವಾಸನೆ ನೀಡಿದ್ದರು. ಈಗ  ಛಿಂದವಾಡಾದ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ನಾನು ಭರವಸೆ ನೀಡುತ್ತೇನೆ’ ಎಂದು ಅವರು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಚೌಹಾಣ್‌ ಅವರು ಮೊದಲು  ಛಿಂದವಾಡಾ ನಗರಕ್ಕೆ  ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.