ಸ್ವಾಮಿ ಶಿವಾನಂದ
ಪಿಟಿಐ ಚಿತ್ರ
ವಾರಾಣಸಿ: ಪದ್ಮಶ್ರೀ ಪುರಸ್ಕೃತ 128 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ಶನಿವಾರ ರಾತ್ರಿ ನಿಧನರಾದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಾಣಸಿಯ ಬಿಎಚ್‌ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರು ಮೃತರಾಗಿದ್ದು, ಭಾನುವಾರ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹತ್ತಿರದವರ ಮಾಹಿತಿ ಆಧರಿಸಿ ವರದಿಗಳು ತಿಳಿಸಿವೆ.
ಯೋಗಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು
ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ ಆ. 8, 1896 ರಂದು ಜನಿಸಿದ್ದ ಬಾಬಾ ಶಿವಾನಂದ ಅವರು ಆರು ವರ್ಷದವನಿದ್ದಾಗ ಹಸಿವಿನಿಂದ ತಮ್ಮ ಹೆತ್ತವರನ್ನು ಕಳೆದುಕೊಂಡರು. ಅಂದಿನಿಂದ, ಅವರು ಕಠಿಣ ಮತ್ತು ಶಿಸ್ತಿನ ಜೀವನವನ್ನು ನಡೆಸಿದರು, ಅರ್ಧ ಹೊಟ್ಟೆ ಆಹಾರವನ್ನು ಸೇವಿಸುತ್ತಿದ್ದರು. ಅವರ ಹೆತ್ತವರು ಮೃತಪಟ್ಟ ಬಳಿಕ, ಓಂಕಾರಾನಂದ ಸ್ವಾಮಿ ಎನ್ನುವವರು ನೋಡಿಕೊಳ್ಳುತ್ತಿದ್ದರು. ಅವರಿಂದ ಶಿವಾನಂದ ಅವರು ಆಧ್ಯಾತ್ಮಿಕ ಶಿಕ್ಷಣ ಮತ್ತು ಜೀವನ ಬೋಧನೆಗಳನ್ನು ಪಡೆದರು ಎಂದು ಶಿಷ್ಯರ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.
ಶಿವಾನಂದ ಅವರ ನಿಧನಕ್ಕೆ ಸಂತಾಪ ಸೂಚಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಯೋಗ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಕಾಶಿಯ ಹೆಸರಾಂತ ಯೋಗ ಗುರು ಪದ್ಮಶ್ರೀ ಸ್ವಾಮಿ ಶಿವಾನಂದ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ನಿಮ್ಮ ಆಧ್ಯಾತ್ಮಿಕ ಅಭ್ಯಾಸ ಮತ್ತು ಯೋಗ ಜೀವನವು ಇಡೀ ಸಮಾಜಕ್ಕೆ ಒಂದು ಸ್ಫೂರ್ತಿಯಾಗಿದೆ. ನೀವು ನಿಮ್ಮ ಇಡೀ ಜೀವನವನ್ನು ಯೋಗದ ಅಭ್ಯಾಸಕ್ಕಾಗಿ ಮುಡಿಪಾಗಿಟ್ಟಿದ್ದೀರಿ. ಅಗಲಿದ ಆತ್ಮಕ್ಕೆ ಮೋಕ್ಷ ಸಿಗಲಿ, ಅವರ ದುಃಖಿತ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ಬಾಬಾ ವಿಶ್ವನಾಥರನ್ನು ಪ್ರಾರ್ಥಿಸುತ್ತೇನೆ’ ಎಂದು ಬರದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.