ADVERTISEMENT

ಕೋವಿಡ್‌ಗೆ ಗಿಡ ಮೂಲಿಕೆಯ ಮೈಸೂರ್‌ ಪಾಕ್‌ ಮಾರಾಟ ಮಾಡುತ್ತಿದ್ದ ಅಂಗಡಿ ಸೀಲ್‌!

ಪಿಟಿಐ
Published 9 ಜುಲೈ 2020, 13:45 IST
Last Updated 9 ಜುಲೈ 2020, 13:45 IST
ಮೈಸೂರ್‌ ಪಾಕ್‌
ಮೈಸೂರ್‌ ಪಾಕ್‌   

ಕೊಯಮತ್ತೂರು: ಕೋವಿಡ್‌–19 ಅನ್ನು ವಾಸಿ ಮಾಡುವ ವಿಶೇಷ ಮೈಸೂರ್‌ಪಾಕ್‌ ಅನ್ನು ಸಿದ್ಧಪಡಿಸಿರುವುದಾಗಿ ಹೇಳಿದ್ದ ಕೊಯಮತ್ತೂರಿನ ಸಹಿ ಪದಾರ್ಥ ಮಾರಾಟ ಮಳಿಗೆಯನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬುಧವಾರ ಸೀಲ್‌ ಮಾಡಲಾಗಿದೆ.

‘19 ಗಿಡ ಮೂಲಿಕೆಗಳನ್ನು ಬಳಸಿನಮ್ಮ ಅಂಗಡಿಯಲ್ಲಿ ತಯಾರಿಸಲಾಗಿರುವ ಮೈಸೂರ್‌ ಪಾಕ್‌ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ 19ಗೆ ಮದ್ದಾಗಲಿದೆ. ಮೂರು ದಿನಗಳ ಕಾಲ, ನಿತ್ಯ ಮೂರು ಬಾರಿ ನಮ್ಮ ಅಂಗಡಿಯ ಮೈಸೂರ್‌ ಪಾಕ್‌ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಮೂರೇ ದಿನಕ್ಕೆ ಕೋವಿಡ್‌ ವಾಸಿಯಾಗಲಿದೆ,’ ಎಂದು ಅಂಗಡಿ ಮಾಲೀಕ ಕರಪತ್ರಗಳನ್ನು ಮುದ್ರಿಸಿ ಹಂಚಿದ್ದರು.

ಇದೇ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಲವಾರು ಜನರು ಒಂದು ಕೆ.ಜಿಗೆ ₹800 ನೀಡಿ ಮೈಸೂರ್‌ ಪಾಕ್‌‌ ಖರೀದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಸುದ್ದಿ ತಿಳಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಕೆ ತಮಿಳುಸೆಲ್ವನ್ ಅವರು ತೊಟ್ಟಿಪಾಳ್ಯಂ ಪ್ರದೇಶದ ಅಂಗಡಿಯನ್ನು ಪರಿಶೀಲಿಸಿದ್ದು, 120 ಕೆ.ಜಿ ಮೈಸೂರ್‌ ಪಾಕ್‌ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೈಸೂರ್‌ ಪಾಕ್‌ನ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.