ADVERTISEMENT

ಸುಗಮ ದತ್ತಾಂಶ ಹಂಚಿಕೆ: ಸಮನ್ವಯ ಅಗತ್ಯ; ಸಿಬಿಐ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌

ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರ

ಪಿಟಿಐ
Published 18 ಅಕ್ಟೋಬರ್ 2025, 13:33 IST
Last Updated 18 ಅಕ್ಟೋಬರ್ 2025, 13:33 IST
ಪ್ರವೀಣ್‌ ಸೂದ್‌–ಪಿಟಿಐ ಚಿತ್ರ
ಪ್ರವೀಣ್‌ ಸೂದ್‌–ಪಿಟಿಐ ಚಿತ್ರ   

ನವದೆಹಲಿ: ‘ವಿದೇಶಕ್ಕೆ ಪರಾರಿಯಾಗಿರುವ ಅಪರಾಧಿಗಳನ್ನು ಹಸ್ತಾಂತರಿಸುವ ಪ್ರಯತ್ನಗಳನ್ನು ಬಲಪಡಿಸಲು ದೇಶದ ತನಿಖಾ ಸಂಸ್ಥೆಗಳ ನಡುವೆ ಸಮನ್ವಯ ಇನ್ನಷ್ಟು ಉತ್ತಮವಾಗುವುದರ ಜೊತೆಗೆ ದತ್ತಾಂಶ ಹಂಚಿಕೆ ಸುಗಮವಾಗಿ ಆಗಬೇಕಿದೆ’ ಎಂದು ಸಿಬಿಐ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ. 

‘ದೇಶಭ್ರಷ್ಟರ ಹಸ್ತಾಂತರ–ಸವಾಲುಗಳು ಹಾಗೂ ಕಾರ್ಯತಂತ್ರ’ ಕುರಿತಾಗಿ ನವದೆಹಲಿಯಲ್ಲಿ ಎರಡು ದಿನಗಳ ಕಾಲ ಕೇಂದ್ರಿಯ ತನಿಖಾ ಸಂಸ್ಥೆಯು (ಸಿಬಿಐ) ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಹಿರಿಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

‘ದೇಶಕ್ಕೆ ಬೇಕಾದ ಅಪರಾಧಿಗಳ ಕುರಿತು ದತ್ತಾಂಶಗಳ ಸುಗಮ ಹಂಚಿಕೆಯ ಜೊತೆಗೆ ಸಮನ್ವಯದಿಂದ ಕೆಲಸ ಮಾಡಬೇಕೆಂದು ಸೂದ್‌ ಪ್ರತಿಪಾದಿಸಿದರು’ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ADVERTISEMENT

‘ಎರಡು ದಿನದ ಸಮ್ಮೇಳನದಲ್ಲಿ ನಡೆದ ಚರ್ಚೆಗಳಿಂದ ಹೊಮ್ಮಿದ ವಿಷಯಗಳನ್ನು ಆಧರಿಸಿ ಭವಿಷ್ಯದ ಕಾರ್ಯಸೂಚಿ ಸಿದ್ಧಪಡಿಸಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲಾಗಿದೆ’ ಎಂದು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ್‌ ಮೋಹನ್‌ ತಿಳಿಸಿದ್ದಾರೆ.

ವಿದೇಶಕ್ಕೆ ಪರಾರಿಯಾದ ಅಪರಾಧಿಗಳನ್ನು ದೇಶಕ್ಕೆ ಮರಳಿ ಕರೆತರಲು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ವಿಸ್ತೃತವಾಗಿ ಮಾಹಿತಿ ಹಂಚಿಕೊಂಡರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ವಿವಿಧ ರಾಜ್ಯ, ಸಿಬಿಐ,  ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯಕ್ಕೆ ಸೇರಿದ 200ಕ್ಕೂ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.